ಬೆಂಗಳೂರು: ಸಂಪುಟ ವಿಸ್ತರಣೆ ಬಗ್ಗೆ ವಿಭಿನ್ನ ಹೇಳಿಕೆ ನೀಡುತ್ತಿರುವ ಬಿಎಸ್‍ವೈ ಕ್ಯಾಬಿನೆಟ್ ಸಚಿವರ ಬಗ್ಗೆ ಮಿತ್ರಮಂಡಳಿ ಕೆಂಡಾಮಂಡಲವಾಗಿದೆ. ಗೆದ್ದಿರುವ 11 ಮಂದಿ ಸೋತ ಇಬ್ಬರು, ಸ್ಪರ್ಧಿಸದ ಮೂವರು ಶಾಸಕರ ಮಿತ್ರಮಂಡಳಿ ಕೂಟ ಸಿಡಿದೆದ್ದಿದೆ. ಮಿತ್ರಮಂಡಳಿ ಶಾಸಕರ ತಂಡದಿಂದ ಸಿಎಂ ಬಿಎಸ್‍ವೈಗೆ ದೂರು ನೀಡಿದ್ದು, ಬಿಜೆಪಿಯಲ್ಲಿ ಕದನ ಶುರುವಾಗಿದೆ.
ಸಂಪುಟ ವಿಸ್ತರಣೆ ಬಗ್ಗೆ ಸಚಿವರಾದ ಸಿ.ಟಿ.ರವಿ, ಈಶ್ವರಪ್ಪ, ಡಿಸಿಎಂ ಗೋವಿಂದ ಕಾರಜೋಳ ಅವರ ವಿಭಿನ್ನ ಹೇಳಿಕೆಗಳು ಗೊಂದಲ ಸೃಷ್ಟಿಸಿವೆ. ಅಷ್ಟೇ ಅಲ್ಲ ಮಿತ್ರಮಂಡಳಿ ಕೂಡ ಆಕ್ರೋಶಗೊಂಡಿದ್ದು, ನಮ್ಮ ಬೆಂಬಲದಿಂದ ಸರ್ಕಾರ ಮಾಡಿ ನಮ್ಮನ್ನೇ ಟಾರ್ಗೆಟ್ ಮಾಡ್ತಿದ್ದಾರೆ ಅಂತ ಸಿಎಂ ಬಳಿಗೆ ದೂರು ತೆಗೆದುಕೊಂಡು ಹೋಗಿದ್ದಾರೆ.
ನಮ್ ಟೀಂ ಸುಮ್ಮನಿದೆ. ಇಲ್ಲಿ ತನಕ ಬಹಿರಂಗವಾಗಿ ಸಂಪುಟ ವಿಳಂಬದ ಬಗ್ಗೆ ನಾವು ಮಾತಾಡಿಲ್ಲ. ಆದರೆ ನಮ್ಮಿಂದ ಸರ್ಕಾರ ಮಾಡಿ ಸಚಿವ ಸ್ಥಾನ ಕುರ್ಚಿಯಲ್ಲಿ ಕುಂತವರು ಈಗ ಬೇಕಾಬಿಟ್ಟಿ ಮಾತಾಡುತ್ತಿದ್ದಾರೆ. ಫೆಬ್ರವರಿ 19ರ ತನಕ ಕಾಯುತ್ತೇವೆ, ಅಮೇಲೆ ನಾವು ಶುರು ಮಾಡುತ್ತೇವೆ. ಮಿಕ್ಕಿದ್ದೆಲ್ಲ ನಿಮಗೆ ಬಿಟ್ಟಿದ್ದು. ನುಡಿದಂತೆ ನಮ್ಮ ಯಡಿಯೂರಪ್ಪ ನಡೆಯುತ್ತಾರೆ ಅಂದುಕೊಂಡಿದ್ದೇವೆ ಅಂತ ಮುಖ್ಯಮಂತ್ರಿ ಮುಂದೆಯೇ ಖಡಕ್ ಆಗಿ ಹೇಳಿದ್ದಾರೆ ಎನ್ನಲಾಗಿದೆ.
ಅಂದಹಾಗೆ ಸಂಪುಟ ವಿಳಂಬಕ್ಕೆ ಮಿತ್ರಮಂಡಳಿ ಆಕ್ರೋಶಗೊಂಡಿದ್ದರೂ ಸಂಕ್ರಾಂತಿ ಮುಗಿಯುವ ತನಕ ತಾಳ್ಮೆಯಿಂದ ಇರಲು ಪ್ಲ್ಯಾನ್ ಮಾಡಿದ್ದಾರೆ. ಹಾಗಾಗಿಯೇ ಬಿಎಸ್‍ವೈ ಗಮನಕ್ಕೆ ತಂದು ಸುಮ್ಮನಾಗಿರುವ ಮಿತ್ರಮಂಡಳಿ ಕಾದುನೋಡುವ ತಂತ್ರಕ್ಕೆ ಶರಣಾಗಿದೆ. ಆದರೆ ಫೆಬ್ರವರಿ 19ರೊಳಗೆ ಸಂಪುಟ ವಿಸ್ತರಣೆ ಆಗುತ್ತಾ..? ಅಥವಾ ಮೂಲ ಬಿಜೆಪಿಗರ ಬಹಿರಂಗ ಹೇಳಿಕೆಗಳೇ ಬಿಎಸ್‍ವೈ ಸರ್ಕಾರದಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಸುತ್ತಾ ಅನ್ನೋದೇ ಸದ್ಯದ ಕುತೂಹಲವಾಗಿದೆ.