ಬೆಂಗಳೂರು: ಉಪ ಚುನಾವಣೆ ಗೆದ್ದ ಬಳಿಕ ಸಿಎಂ ಯಡಿಯೂರಪ್ಪಗೆ ಹೊಸ ಸಂಕಟ ಶುರುವಾಗಿದೆ. ಸಂಪುಟ ವಿಸ್ತರಣೆಯೇ ಸಿಎಂ ಯಡಿಯೂರಪ್ಪಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಅದರಲ್ಲೂ ಆ ಒಂದು ಖಾತೆಗಾಗಿ ಇಬ್ಬರು ಪ್ರಬಲ ನಾಯಕರು ಗುದ್ದಾಟ ನಡೆಸುತ್ತಿದ್ದು, ರಾಜಾಹುಲಿಗೆ ತಲೆ ಕೆಡಿಸುವಂತೆ ಮಾಡಿದೆ. ಇಬ್ಬರನ್ನೂ ಬಿಡೋ ಮನಸ್ಸು ಯಡಿಯೂರಪ್ಪಗೆ ಇಲ್ಲ. ಒಬ್ಬರಿಗೆ ಕೊಟ್ಟರೆ ಇನ್ನೊಬ್ಬರು ಬಂಡಾಯ ಸಾರೋದು ಗ್ಯಾರಂಟಿ. ಹೀಗಾಗಿ ಅಡಕತ್ತರಿಯಲ್ಲಿ ಸಿಎಂ ಯಡಿಯೂರಪ್ಪ ಸಿಲುಕಿದ್ದಾರೆ.
ಜಲಸಂಪನ್ಮೂಲ ಖಾತೆಗಾಗಿ ಬಸವರಾಜ್ ಬೊಮ್ಮಾಯಿ, ಸಾಹುಕಾರ್ ರಮೇಶ್ ಜಾರಕಿಹೋಳಿ ಪಟ್ಟು ಹಿಡಿದಿದ್ದಾರಂತೆ. ನಮಗೆ ಆ ಖಾತೆ ನೀಡಬೇಕು ಅಂತ ಸಿಎಂಗೆ ದುಂಬಾಲು ಬಿದ್ದಿದ್ದಾರೆ. ಈಗಾಗಲೇ ಗೃಹ ಇಲಾಖೆ ಹೊಂದಿರೋ ಬೊಮ್ಮಾಯಿ ನನಗೆ ಗೃಹ ಖಾತೆ ಬೇಡ. ಹಿಂದೆಯೂ ನಾನು ಜಲಸಂಪನ್ಮೂಲ ಮಂತ್ರಿ ಆಗಿದ್ದೆ. ಈಗ ಅದನ್ನೇ ಕೊಡಿ. ಉತ್ತಮವಾಗಿ ಕೆಲಸ ಮಾಡ್ತೀನಿ ಅಂತ ಯಡಿಯೂರಪ್ಪಗೆ ಮನವಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇತ್ತ ಬಿಜೆಪಿ ಸರ್ಕಾರ ಬರಲು ಕಾರಣರಾದ ಸಾಹುಕಾರ್ ರಮೇಶ್ ಜಾರಕಿಹೋಳಿ ಡಿಕೆ ಶಿವಕುಮಾರ್ ನಿರ್ವಹಿಸುತ್ತಿದ್ದ ಖಾತೆಯೇ ನನಗೆ ಬೇಕು. ಹೀಗಾಗಿ ಜಲಸಂಪನ್ಮೂಲ ಖಾತೆ ನನಗೆ ಕೊಡಿ ಅಂತ ಯಡಿಯೂರಪ್ಪ ಮುಂದೆ ಬೇಡಿಕೆ ಇಟ್ಟಿದ್ದಾರಂತೆ. ತಮ್ಮ ಶಿಷ್ಯ ಬೊಮ್ಮಾಯಿಗೆ ಖಾತೆ ಕೊಟ್ರೆ, ಸರ್ಕಾರ ಬರಲು ಕಾರಣರಾದರೂ ಸಾಹುಕಾರ್ ಗೆ ಕೋಪ ಬರುತ್ತದೆ.
ಸಾಹುಕಾರ್ ಗೆ ಕೊಟ್ರೆ ಬೊಮ್ಮಾಯಿ ಮುನಿಸಿಕೊಳ್ಳೋದು ಗ್ಯಾರಂಟಿ. ಹೀಗಾಗಿ ಯಾರಿಗೆ ಖಾತೆ ಕೊಡಬೇಕು ಅನ್ನೋ ಗೊಂದಲದಲ್ಲಿ ಸಿಎಂ ಇದ್ದು, ಯಾವ ಸೂತ್ರ ಹುಡುಕ್ತಾರೆ ಕಾದುನೋಡಬೇಕು.