ಬೆಂಗಳೂರು: ಸೋಮವಾರದಿಂದ ಒಂದು ತಿಂಗಳ ಕಾಲ ಸುದೀರ್ಘ ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ. ಮಾರ್ಚ್ 2 ರಿಂದ 31 ರವರೆಗೆ ಸುಧೀರ್ಘ ಬಜೆಟ್ ಕಲಾಪ ನಡೆಯಲಿದೆ. ಇಡೀ ತಿಂಗಳು ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ನಿತ್ಯ ಜಂಗೀ ಕುಸ್ತಿಗೆ ಉಭಯ ಸದನಗಳು ವೇದಿಕೆಯಾಗಲಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸದನದಲ್ಲಿ ಬಿಜೆಪಿಯನ್ನು ಕಟ್ಟಿ ಹಾಕಲು ಸಾಕಷ್ಟು ತಯಾರಿ ಮಾಡಿಕೊಂಡಿವೆ. ಪ್ರತಿಪಕ್ಷಗಳಿಗೆ ತಕ್ಕ ಪ್ರತಿಯೇಟು ಕೊಡಲು ಬಿಜೆಪಿ ಸಹ ಸಿದ್ಧತೆ ಮಾಡಿಕೊಂಡಿದೆ.
ಮುಖ್ಯವಾಗಿ ಬಜೆಟ್ ಅಧಿವೇಶನದಲ್ಲಿ ನೆರೆ ಹಾವಳಿ, ಅತಿವೃಷ್ಠಿ, ಅಸಮರ್ಪಕ ಪರಿಹಾರ ವಿತರಣೆ, ನೆರೆ ಪರಿಹಾರದಲ್ಲಿ ದೋಷ-ಅಕ್ರಮ, ಕೇಂದ್ರದ ತಾತ್ಸಾರ, ಕಾನೂನು ಸುವ್ಯವಸ್ಥೆ, ಕ್ಷೇತ್ರಗಳಿಗೆ ಅನುದಾನ ಕಡಿತ, ಕುಂಠಿತ ಅಭಿವೃದ್ಧಿ, ಉತ್ತರ ಕರ್ನಾಟಕದ ಸಮಸ್ಯೆಗಳು, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಕುರಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗಳು ಸದನದಲ್ಲಿ ಸದ್ದು ಮಾಡಲಿವೆ. ರಾಜ್ಯ ಬಜೆಟ್ ನ ಲೋಪದೋಷಗಳನ್ನೂ ಸದನದಲ್ಲಿ ಪ್ರಸ್ತಾಪಸಿ ಸರ್ಕಾರಕ್ಕೆ ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಳ್ಳಲಿವೆ.
Advertisement
Advertisement
ಮಾರ್ಚ್ 5 ರಂದು ಸಿಎಂ ಯಡಿಯೂರಪ್ಪ ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಇದಕ್ಕೂ ಮುನ್ನ ಬಜೆಟ್ ಅಧಿವೇಶನದ ಮೊದಲ ದಿನವಾದ ನಾಳೆ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸಿಎಂ ಉತ್ತರ ನೀಡಲಿದ್ದಾರೆ. ನಾಳೆ ರಾಜ್ಯಪಾಲರ ಭಾಷಣ ಮೇಲಿನ ಚರ್ಚೆಗೆ ಉತ್ತರ ನೀಡಿದ ಬಳಿಕ ವಿಧಾನಸಭೆಯಲ್ಲಿ ಒಟ್ಟು 8 ಮಹತ್ವದ ವಿಧೇಯಕಗಳು ಮಂಡನೆಯಾಗಲಿವೆ. ನಂತರ ಮಾರ್ಚ್ 3 ಮತ್ತು 4 ಎರಡು ದಿನಗಳ ಕಾಲ ಸಂವಿಧಾನದ ಕುರಿತು ಉಭಯ ಸದನಗಳಲ್ಲೂ ವಿಶೇಷ ಚರ್ಚೆ ನಡೆಯಲಿದೆ.