ಬೆಂಗಳೂರು: ರಾಜ್ಯ ಸರ್ಕಾರದ ಪ್ರಸಕ್ತ ಹಣಕಾಸು ಸ್ಥಿತಿ ಚೆನ್ನಾಗಿಲ್ಲ. ಹೀಗಾಗಿ ಈ ಸಲದ ಬಜೆಟ್ ಸಿದ್ಧಪಡಿಸುತ್ತಿರುವ ಸಿಎಂ ಯಡಿಯೂರಪ್ಪ ಇತಿಮಿತಿಯಲ್ಲೇ ರಾಜ್ಯ ಬಜೆಟ್ ಕೊಡಲು ಮುಂದಾಗಿದ್ದಾರೆ. ಬಿಜೆಪಿ ಸರ್ಕಾರ ಬಂದ ಆರಂಭದಲ್ಲಿ ನೆರೆ, ಅತಿವೃಷ್ಟಿ ಪರಿಹಾರ ಕಾಮಗಾರಿಗಳಿಗೆ ಹಣ ಕ್ರೋಢೀಕರಿಸುವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿತ್ತು. ಬಳಿಕ ಕಾಂಗ್ರೆಸ್, ಜೆಡಿಎಸ್ ನಿಂದ ವಲಸೆ ಬಂದವರ ಕ್ಷೇತ್ರಗಳಿಗೆ ಸಾಕಷ್ಟು ಅನುದಾನವನ್ನೂ ಕೊಡಲಾಯ್ತು. ಇದರಿಂದ ಸರ್ಕಾರ ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಹೀಗಾಗಿ ಸರ್ಕಾರದ ಮಟ್ಟದಲ್ಲಿ ವೆಚ್ಚ ಕಡಿತ, ಪ್ರಮುಖ ಯೋಜನೆಗಳ ಅನುದಾನ ಕಡಿತ, ಮೈತ್ರಿ ಅವಧಿಯಲ್ಲಿ ಶಾಸಕರಿಗೆ ಬಿಡುಗಡೆಯಾಗಿದ್ದ ಅನುದಾನ ಸ್ಥಗಿತ ಸೇರಿದಂತೆ ಹತ್ತಾರು ಪರಿಹಾರೋಪಾಯಗಳಿಗೆ ಸರ್ಕಾರ ಮುಂದಾಗಿದೆ.
Advertisement
ಈ ಮಧ್ಯೆ ಈಗಾಗಲೇ ತಮ್ಮ ತಮ್ಮ ಸ್ವಕ್ಷೇತ್ರಗಳಿಗೆ ಸಾಕಷ್ಟು ಅನುದಾನ ಪಡೆದ ಮಿತ್ರಮಂಡಳಿ ಗುಂಪು ಈಗ ಮತ್ತೊಂದು ವರಸೆ ತೆಗೆದಿದೆ ಎನ್ನಲಾಗಿದೆ. ರಾಜ್ಯ ಬಜೆಟ್ ನಲ್ಲೂ ತಮ್ಮ ಇಲಾಖೆಗಳಿಗೆ ಹೆಚ್ಚಿನ ಅನುದಾನ ಘೋಷಣೆ ಮಾಡುವಂತೆ ಮಿತ್ರಮಂಡಳಿ ಸಚಿವರು ಸಿಎಂ ಯಡಿಯೂರಪ್ಪ ಮೇಲೆ ಭಾರೀ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ.
Advertisement
ಮಾರ್ಚ್ 5 ರಂದು ಸಿಎಂ ಯಡಿಯೂರಪ್ಪ 2021-22ನೇ ಸಾಲಿನ ಮುಂಗಡ ಪತ್ರ ಮಂಡಿಸಲಿದ್ದಾರೆ. ಈ ಬಜೆಟ್ ನಲ್ಲಿ ಹೆಚ್ಚಿನ ಅನುದಾನಕ್ಕೆ ಮಿತ್ರಮಂಡಳಿ ಸಚಿವರು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಮಿತ್ರಮಂಡಳಿಯ 10 ಜನ ಸಚಿವರಿಗೆ 13 ಇಲಾಖೆಗಳನ್ನು ಹಂಚಲಾಗಿದೆ. ಈ 13 ಇಲಾಖೆಗಳಿಗೂ ಹೆಚ್ಚು ಅನುದಾನ ಘೋಷಿಸಿ. ನಮ್ಮ ಇಲಾಖೆಗಳಲ್ಲಿ ಹೊಸ ಯೋಜನೆಗಳನ್ನು ಘೋಷಣೆ ಮಾಡಿ ಮತ್ತು ಅವುಗಳಿಗೆ ಅನುದಾನ ಮೀಸಲಿರಿಸಿ. ಜೊತೆಗೆ ಇಲಾಖೆಗಳ ಹಳೆಯ ಯೋಜನೆಗಳಿಗೂ ಅನುದಾನ ಕೊಡಿ ಎಂದು ಮಿತ್ರಮಂಡಳಿ ಸಚಿವರು ಸಿಎಂಗೆ ಬೇಡಿಕೆ ಇಟ್ಟಿದ್ದಾರೆ.
Advertisement
Advertisement
ಮಿತ್ರಮಂಡಳಿ ಸಚಿವರ ವರಸೆಗೆ ಪಕ್ಷದ ಮೂಲ ಸಚಿವರು ಸಿಟ್ಟಿಗೆದ್ದಿದ್ದಾರಂತೆ. ಈಗಾಗಲೇ ಮಿತ್ರಮಂಡಳಿ ತಂಡದ ಎಲ್ಲರ ಕ್ಷೇತ್ರಗಳಿಗೂ ಭರಪೂರ ಅನುದಾನ ಕೊಡಲಾಗಿದೆ. ನಮಗೆ ಅನುದಾನ ಬರೆ ಹಾಕಲಾಗಿದೆ. ಇದನ್ನೇ ಇನ್ನೂ ನಾವೆಲ್ಲ ಅರಗಿಸಿಕೊಂಡಿಲ್ಲ. ಪರಿಸ್ಥಿತಿ ಹೀಗಿರುವಾಗ ಈಗ ಹೊಸಬರ ಇಲಾಖೆಗಳಿಗೂ ಕೇಳಿದಷ್ಟು ಅನುದಾನ ಕೊಟ್ಟುಬಿಟ್ಟರೆ ನಮ್ಮ ಇಲಾಖೆಗಳ ಕತೆ ಏನು? ಇದು ಹಳೆ ಸಚಿವರ ಅಳಲು. ಈಗ ಹಳಬರೂ ಕೂಡ ಸಿಎಂ ಯಡಿಯೂರಪ್ಪಗೆ ಅನುದಾನದ ಬೇಡಿಕೆ ಇಟ್ಟಿದ್ದಾರೆ. ಅವರಿಗೆ ಕೊಟ್ರೆ ನಮಗೂ ಕೊಡಿ. ಈ ಸಲ ನಮಗೆ ಅನ್ಯಾಯವಾದರೆ ನಾವು ಸುಮ್ಮನಿರಲ್ಲ ಎಂಬ ಎಚ್ಚರಿಕೆಯನ್ನೂ ಹಳೆಯ ಸಚಿವರು ನೀಡಿದ್ದಾರೆ ಎನ್ನಲಾಗಿದೆ.
ಅದಾಗಲೇ ಮುಖ್ಯಮಂತ್ರಿಗಳು ಇಲಾಖಾವಾರು ಬಜೆಟ್ ಪೂರ್ವಭಾವಿ ಸಭೆಗಳಲ್ಲಿ ಚರ್ಚೆ ನಡೆಸಿ ಅನುದಾನದ ವಿವರಗಳನ್ನು ಪಡೆದುಕೊಂಡಿದ್ದಾರೆ. ಆದರೆ ಇದರ ಹೊರತಾಗಿಯೂ ಮಿತ್ರಮಂಡಳಿ ಮತ್ತು ಹಿರಿಯ ಸಚಿವರ ತಂಡಗಳು ಪ್ರತ್ಯೇಕವಾಗಿ ಸಿಎಂ ಭೇಟಿ ಮಾಡಿ ಮತ್ತಷ್ಟು ಅನುದಾನಗಳಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗಿದೆ.
ಎರಡೂ ಗುಂಪುಗಳ ಬೇಡಿಕೆ, ಒತ್ತಡಗಳಿಗೆ ಸಿಎಂ ಖುದ್ದು ಬೇಸರಗೊಂಡಿದ್ದಾರೆ ಎನ್ನಲಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಸಚಿವರು ಇನ್ನೂ ಅರ್ಥ ಮಾಡಿಕೊಂಡಿಲ್ಲದಿರುವುದು ಸಿಎಂಗೆ ಬೇಸರ ತಂದಿದೆ. ಕಳೆದ ಸಲದ ಬಜೆಟ್ ಗಾತ್ರ 2.34 ಲಕ್ಷ ಕೋಟಿ ರೂ. ಆದರೆ ಈ ಸಲ 2.40 ಲಕ್ಷ ಕೋಟಿ ರೂ. ಆಸು-ಪಾಸು ಬಜೆಟ್ ಗಾತ್ರ ಹೆಚ್ಚಲಿದೆ. ಆದ್ಯತೆ ಮತ್ತು ಅಗತ್ಯಗಳ ಮೇರೆಗೆ ಇಲಾಖಾವಾರು ಅನುದಾನ, ಹಳೆಯ ಯೋಜನೆಗಳ ಮುಂದುವರಿಕೆ ಹಾಗೂ ಹೊಸ ಯೋಜನೆಗಳ ಘೋಷಣೆಗೆ ಸಿಎಂ ನಿರ್ಧರಿಸಿದ್ದಾರೆ. ಇತಿಮಿತಿಯಲ್ಲೇ ಬಜೆಟ್ ಮಂಡನೆಗೆ ಮುಂದಾಗಿರುವ ಸಿಎಂಗೆ ಸಚಿವರ ಅನುದಾನದ ಬೇಡಿಕೆ ತಲೆನೋವು ತಂದಿದೆ ಎನ್ನಲಾಗಿದೆ.