ಬೆಂಗಳೂರು: ನೂತನ ಸಚಿವರು ಸೋಮವಾರಕ್ಕೆ ನಿರೀಕ್ಷೆ ನೆಟ್ಟು ಕೂತಿದ್ದಾರೆ. 10 ಹೊಸ ಸಚಿವರು ನಾಳೆಯಾದರೂ ತಮಗೆಲ್ಲರಿಗೆ ಬಯಸಿದ ಖಾತೆಗಳು ಸಿಗುತ್ತದಾ ಎಂಬ ನಿರೀಕ್ಷೆಯಲ್ಲಿದ್ದಾರೆ. ಶನಿವಾರ ಬೆಂಗಳೂರಿನಲ್ಲಿ ಮಾತಾಡಿದ್ದ ಸಿಎಂ ಯಡಿಯೂರಪ್ಪ, ಸೋಮವಾರದಂದು ಖಾತೆ ಹಂಚಿಕೆ ಮಾಡುವುದಾಗಿ ತಿಳಿಸಿದ್ದರು. ನಿನ್ನೆ ಸರ್ಕಾರಿ ರಜಾ ದಿನವಾಗಿದ್ದರಿಂದ ಖಾತೆ ಹಂಚಿಕೆ ಮಾಡಲಾಗಿಲ್ಲ ಎಂದೂ ಸಿಎಂ ಹೇಳಿದ್ದರು. ಹೀಗಾಗಿ ಸೋಮವಾರ ಖಾತೆ ಹಂಚಿಕೆ ನಡೆಯುತ್ತಾ ಇಲ್ವಾ ಎಂಬ ಕುತೂಹಲ ಹುಟ್ಟಿಕೊಂಡಿದೆ.
Advertisement
ಸಿಎಂ ಯಡಿಯೂರಪ್ಪ, ನಾಳೆಯೇ ಖಾತೆ ಹಂಚಿಕೆ ಮಾಡಬೇಕಾದ ಅನಿವಾರ್ಯತೆಗೆ ಸಿಕ್ಕಿಬಿದ್ದಿರೋದೇನೋ ಹೌದು. ಹಾಗಂತ ಕಗ್ಗಂಟು ಬಗೆಹರಿದಿಲ್ಲ. ಖಾತೆ ಕ್ಯಾತೆ ಇನ್ನೂ ಮುಂದುವರಿದಿದೆ. ಇಂದು ಖಾತೆ ಕಗ್ಗಂಟು ಕ್ಲಿಯರ್ ಮಾಡಿದ್ರೆ ಮಾತ್ರ ನಾಳೆ ಹಂಚಿಕೆ ಮಾಡಲು ಸುಲಭವಾಗಲಿದೆ. ಇಲ್ಲದಿದ್ದರೆ ಮತ್ತೆ ಬಿಕ್ಕಟ್ಟು ಮುಂದುವರಿಯುವ ಸಾಧ್ಯತೆಯೂ ಇಲ್ಲದಿಲ್ಲ. ಮುಖ್ಯಮಂತ್ರಿಗಳು ಇಂದು ದಾವಣಗೆರೆ ಮತ್ತು ಹಾಸನ ಜಿಲ್ಲೆಗಳ ಪ್ರವಾಸದಲ್ಲಿದ್ದಾರೆ. ಜಿಲ್ಲಾ ಕಾರ್ಯಕ್ರಮಗಳಲ್ಲಿದ್ದರೂ ಖಾತೆ ಕಗ್ಗಂಟ್ಟು ಬಿಡಿಸುವತ್ತಲೂ ಸಿಎಂ ಚಿತ್ತ ಹರಿಸಿದ್ದಾರಂತೆ. ಬಹುತೇಕ ಇಂದೇ ಖಾತೆ ಕ್ಯಾತೆಗೆ ಫುಲ್ ಸ್ಟಾಪ್ ಇಡಲು ಸಿಎಂ ನಿರ್ಧಾರ ಮಾಡಿದ ಹಾಗಿದೆ. ಅದಕ್ಕಾಗಿಯೇ ಫೋನ್ ಮೂಲಕವೇ ಖಾತೆ ಕಗ್ಗಂಟು ಬಿಡಿಸಲು ಸಿಎಂ ಮುಂದಾಗಿದ್ದಾರೆ ಎಂದು ಹೇಳಲಾಗ್ತಿದೆ. ಪ್ರಭಾವಿ ಖಾತೆ ಕೇಳಿರುವ ಮಿತ್ರಮಂಡಳಿ ಸಚಿವರ ಜೊತೆ ಇಂದು ಸಿಎಂ ಮಾತುಕತೆ ಫೋನ್ ಮೂಲಕವೇ ಮಾತಾಡಲಿದ್ದಾರೆ. ಬಹುತೇಕ ಇಂದೇ ಖಾತೆ ಕಗ್ಗಂಟು ಕ್ಲಿಯರ್ ಮಾಡಲು ಸಿಎಂ ನಿರ್ಧರಿಸಿದ್ದಾರೆ. ಇಂದೇ ಸಮಸ್ಯೆ ಬಗೆಹರಿದರೆ ನಾಳೆ ರಾಜಭವನಕ್ಕೆ ಖಾತೆ ಹಂಚಿಕೆ ಪಟ್ಟಿಯನ್ನು ಸಿಎಂ ರವಾನಿಸಲಿದ್ದಾರೆ.
Advertisement
Advertisement
ಪ್ರಬಲ ಖಾತೆಗಳಿಗೇ ಮಿತ್ರಮಂಡಳಿ ಪಟ್ಟು:
ಮೂಲಗಳ ಪ್ರಕಾರ ಮಿತ್ರಮಂಡಳಿ ಸಚಿವರು ಪ್ರಬಲ ಖಾತೆಗಳಿಗೆ ಹಿಡಿದ ತಮ್ಮ ಪಟ್ಟು ಸಡಿಲಿಸಲು ತಯಾರಿಲ್ಲ ಎನ್ನಲಾಗಿದೆ. ಹೀಗಾಗಿ ಮಿತ್ರಮಂಡಳಿ ಸಚಿವರ ಬೇಡಿಕೆಗೆ ಸಿಎಂ ಯಡಿಯೂರಪ್ಪ 50:50 ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಅಂದ್ರೆ ಬಿಕ್ಕಟ್ಟಿಗೆ ಕಾರಣವಾಗಿರುವ ನಾಲ್ಕು ಖಾತೆಗಳ ಪೈಕಿ ಎರಡು ಖಾತೆಗಳನ್ನು ಕೊಡೋದು. ಉಳಿದ ಎರಡನ್ನು ಇಟ್ಕೊಳ್ಳೋದು. ನಾಲ್ಕು ಪ್ರಬಲ ಖಾತೆಗಳ ಪೈಕಿ ಎರಡು ಖಾತೆಗಳು ಮಿತ್ರಮಂಡಳಿಗೆ ಕೊಡೋದು ಫಿಕ್ಸ್ ಎನ್ನಲಾಗಿದೆ.
Advertisement
ಜಲಸಂಪನ್ಮೂಲ ಖಾತೆ, ರಮೇಶ್ ಜಾರಕಿಹೊಳಿಗೆ ಬಹುತೇಕ ಫಿಕ್ಸ್ ಎಂಬ ಮಾತುಗಳೂ ಕೇಳಿಬರುತ್ತಿವೆ. ಜಾರಕಿಹೊಳಿಯವರಿಗೆ ಈ ಖಾತೆ ಕೊಡುವಂತೆ ಹೈಕಮಾಂಡ್‍ಗೂ ಸಿಎಂ ಮನವರಿಕೆ ಮಾಡಲಿದ್ದಾರೆ. ಡಿಸಿಎಂ ಸ್ಥಾನ ಕೊಡದ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಖಾತೆ ಕೊಡಲು ಸಿಎಂ ಒಪ್ಪಿಕೊಂಡಿದ್ದಾರೆ. ಡಾ.ಕೆ.ಸುಧಾಕರ್ ಗೂ ಖಾತೆ ಹಂಚಿಕೆಯಲ್ಲಿ ಬಂಪರ್ ಖಾತೆ ಸಿಗಲಿದೆ. ಸುಧಾಕರ್ ಗೆ ವೈದ್ಯಕೀಯ ಶಿಕ್ಷಣ ಅಥವಾ ಇಂಧನ ಇಲಾಖೆ ಸಿಗೋ ಸಾಧ್ಯತೆ ಇದೆ ಎನ್ನಲಾಗಿದೆ.
ಆದರೆ ಬೆಂಗಳೂರು ಅಭಿವೃದ್ಧಿ ಮತ್ತು ಗೃಹ ಖಾತೆಗಳ ಹಂಚಿಕೆ ಸದ್ಯಕ್ಕಿಲ್ಲ. ಇವೆರಡೂ ಖಾತೆಗಳನ್ನೂ ಹಂಚಿಕೆ ಮಾಡದಿರಲು ಸಿಎಂ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಬೆಂಗಳೂರು ನಗರಾಭಿವೃದ್ಧಿ ಇಲಾಖೆಯನ್ನು ಸಿಎಂ ತಮ್ಮಲ್ಲೇ ಉಳಿಸಿಕೊಳ್ಳಲಿದ್ದಾರೆ. ಗೃಹ ಖಾತೆ ಬಸವರಾಜ್ ಬೊಮ್ಮಾಯಿ ಬಳಿಯೇ ಉಳಿಯಲಿದೆ. ಈ ಎರಡೂ ಖಾತೆಗಳನ್ನು ಮಿತ್ರಮಂಡಳಿಗೆ ಹಂಚಿಕೆ ಮಾಡದಿರುವ ಮೂಲಕ ಪಕ್ಷದಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಗೆ ಬ್ರೇಕ್ ಹಾಕಲು ಸಿಎಂ ಕಸರತ್ತು ನಡೆಸಿದ್ದಾರೆ.
ಇಂದು ತಡರಾತ್ರಿ ಸಿಎಂ ಯಡಿಯೂರಪ್ಪ ಬೆಂಗಳೂರಿಗೆ ವಾಪಸಾಗಲಿದ್ದಾರೆ. ನಾಳೆಯೇ ಖಾತೆ ಹಂಚಿಕೆ ಬಹುತೇಕ ಫೈನಲ್ ಆಗಿದ್ದು, ನಾಳೆ ಬೆಳಗ್ಗೆ ರಾಜಭವನಕ್ಕೆ ಖಾತೆ ಹಂಚಿಕೆ ಪಟ್ಟಿ ತಲುಪಲಿದೆ ಎನ್ನಲಾಗಿದೆ.