Connect with us

Bengaluru City

ಬಿಎಸ್‍ವೈ ಸಂಪುಟ ರಚನೆ- 10 ಮಂದಿ ಸಚಿವರಾಗಿ ಪ್ರಮಾಣ ವಚನ

Published

on

ಬೆಂಗಳೂರು: ರಾಜ್ಯ ವಿಧಾನಸಭೆಯ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಚುನಾಯಿತರಾದ ವಲಸಿಗ ಶಾಸಕರು ಕೊನೆಗೂ ಸಚಿವರಾಗಿ ಗೆಲುವಿನ ನಗೆ ಬೀರಿದ್ದಾರೆ. ಇವತ್ತು ರಾಜಭವನದಲ್ಲಿ ನಡೆದ ಸರಳ ಪ್ರಮಾಣ ವಚನ ಕಾರ್ಯಕ್ರಮದಲ್ಲಿ 10 ಶಾಸಕರೂ ರಾಜ್ಯಪಾಲರಿಂದ ಪ್ರತಿಜ್ಞಾವಿಧಿ ಸ್ವೀಕರಿಸುವ ಮೂಲಕ ಯಡಿಯೂರಪ್ಪನವರ ನೇತೃತ್ವದ ಸರ್ಕಾರಕ್ಕೆ ಸೇರ್ಪಡೆಯಾಗಿದ್ದಾರೆ. ಆ ಮೂಲಕ ರಾಜ್ಯ ಸಚಿವ ಸಂಪುಟ ಎರಡನೇ ಬಾರಿಗೆ ವಿಸ್ತರಣೆಯಾಗಿದೆ. ವಕಸಿಗರ ಸೇರ್ಪಡೆಯಿಂದ ರಾಜ್ಯ ಸಚಿವ ಸಂಪುಟದ ಸಂಖ್ಯಾಬಲ 28 ಕ್ಕೆ ಏರಿದೆ. ಅಲ್ಲದೆ, ರಾಜ್ಯ ಸಚಿವ ಸಂಪುಟದಲ್ಲಿ ಇನ್ನೂ ಆರು ಸ್ಥಾನಗಳು ಖಾಲಿ ಇವೆ.

ಯಶವಂತಪುರ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್, ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಲಕ್ಷ್ಮಣ ರಾವ್ ಜಾರಕೀಹೊಳಿ, ವಿಜಯನಗರ ಕ್ಷೇತ್ರದ ಆನಂದ್ ಸಿಂಗ್, ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ ಕೆ ಸುಧಾಕರ್, ಕೃಷ್ಣರಾಜಪುರ ಕ್ಷೇತ್ರದ ಶಾಸಕ ಬಿಎ ಬಸವರಾಜ್, ಯಲ್ಲಾಪುರ ಕ್ಷೇತ್ರದ ಶಾಸಕ ಅರೆಬೈಲ್ ಶಿವರಾಮ್ ಹೆಬ್ಬಾರ್, ಹಿರೇಕೆರೂರು ಕ್ಷೇತ್ರದ ಬಸವನಗೌಡ ಚನ್ನಬಸವನಗೌಡ ಪಾಟೀಲ್, ಮಹಾಲಕ್ಷೀಪುರ ಕ್ಷೇತ್ರದ ಶಾಸಕ ಕೆ ಗೋಪಾಲಯ್ಯ, ಕೃಷ್ಣರಾಜಪೇಟೆ ಕ್ಷೇತ್ರದ ಶಾಸಕ ಎಂ ಸಿ ನಾರಾಯಣಗೌಡ ಹಾಗೂ ಕಾಗವಾಡ ಕ್ಷೇತ್ರದ ಶಾಸಕ ಶ್ರೀಮಂತ ಬಾಳಾ ಸಾಹೇಬ್ ಪಾಟೀಲ್ ಅವರು ರಾಜಭವನದ ಗಾಜಿನ ಮನೆಯಲ್ಲಿ ನಡೆದ ವಿಶೇಷ ಹಾಗೂ ಕಿಕ್ಕಿರಿದ ಸಮಾರಂಭದಲ್ಲಿ ನೆರೆದ ಜನಸ್ತೋಮದ ಹರ್ಷೋದ್ಗಾರಗಳ ನಡುವೆ ಸಂಪುಟ ದರ್ಜೆ ಸಚಿವರಾಗಿ ಇಲ್ಲಿ ಇಂದು ಪ್ರಮಾಣ ವಚನ ಸ್ವೀಕರಿಸಿದರು.

ರಾಜ್ಯಪಾಲ ವಜುಭಾಯಿ ರುಢಾಭಾಯಿ ವಾಲಾ ಅವರು ಎಲ್ಲಾ ಹತ್ತು ಸಚಿವರಿಗೆ ಅಧಿಕಾರಪದ ಮತ್ತು ಗೋಪ್ಯತಾ ಪ್ರಮಾಣ ವಚನ ಬೋಧಿಸಿದರು. ಗುರುವಾರ ಬೆಳಿಗ್ಗೆ 10-30 ಗಂಟೆಗೆ ಪ್ರಾರಂಭವಾದ ಈ ಸಮಾರಂಭವು ಮೂವತ್ತು ನಿಮಿಷಗಳ ಕಾಲ ನಡೆಯಿತು.

ಕಾರ್ಯಕ್ರಮದ ವಿಶೇಷತೆಗಳು: ಪ್ರಮಾಣ ವಚನ ಸ್ವೀಕರಿಸಿದೊಡನೆಯೇ, ಎಲ್ಲಾ ಹತ್ತೂ ಸಚಿವರಿಗೂ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಯವರು ಹೂಗುಚ್ಛ ನೀಡಿ ಅಭಿನಂದಿಸಿದರು. ಎಲ್ಲಾ ಸಚಿವರೂ ಕನ್ನಡ ಭಾಷೆಯಲ್ಲಿ ಹಾಗೂ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ಆಕರ್ಷಕ ಅಂಶವಾಗಿತ್ತು. ಅಲ್ಲದೆ, ಶಿವರಾಮ್ ಹೆಬ್ಬಾರ್ ಅವರು ತಮ್ಮ ತಂದೆ-ತಾಯಿ ಹಾಗೂ ತಮ್ಮ ಕ್ಷೇತ್ರ ಜನತೆಯಲ್ಲಿಯೂ ಪ್ರಮಾಣ ವಚನ ಸ್ವೀಕರಿಸಿದರು. ನಂತರ, ಬಿ ಸಿ ಪಾಟೀಲ್ ಅವರೂ ತಂದೆ-ತಾಯಿ, ಕ್ಷೇತ್ರ ಜನತೆಯ ಜೊತೆಗೆ ಜಗಜ್ಯೋತಿ ಬಸವೇಶ್ವರರ ಹೆಸರಿನಲ್ಲಿಪ್ರಮಾಣ ವಚನ ಸ್ವೀಕರಿಸಿದರು.

ರಮೇಶ್ ಜಾರಕಿಹೊಳಿ ಅವರು ಎಂದಿನಂತೆ ಸರಳ ಉಡುಪಿನಲ್ಲಿ ಆಗಮಿಸಿದ್ದರು. ಕೆ ಗೋಪಾಲಯ್ಯ ಅವರು ಸಾಂಪ್ರದಾಯಿಕ ರೇಷ್ಮೆ ವಸ್ತ್ರಧಾರಿಯಾಗಿ ಎಲ್ಲರ ಗಮನಸೆಳೆದರು.  ಎಸ್ ಟಿ ಸೋಮಶೇಖರ್, ಡಾ ಕೆ ಸುಧಾಕರ್, ಬಿ ಎ ಬಸವರಾಜ್, ಶಿವರಾಮ ಹೆಬ್ಬಾರ್, ಬಿ ಸಿ ಪಾಟೀಲ್, ಕೆ ಗೋಪಾಲಯ್ಯ, ಎಂ ಸಿ ನಾರಾಯಣಗೌಡ ಹಾಗೂ ಶ್ರೀಮಂತ ಪಾಟೀಲ್ ಅವರು ಪ್ರಪ್ರಥಮ ಬಾರಿಗೆ ರಾಜ್ಯ ಸಚಿವ ಸಂಪುಟವನ್ನು ಪ್ರವೇಶಿಸಿದ್ದಾರೆ. ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ಅವರು ಈ ಮುನ್ನ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

ಬಿ ಎಸ್ ಯಡಿಯೂರಪ್ಪ ಸಚಿವ ಸಂಪುಟದ ಸದಸ್ಯರು, ಸಂಸದರು ಹಾಗೂ ಶಾಸಕರೂ ಸೇರಿದಂತೆ ಹಲವು ಗಣ್ಯರು, ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.

 

Click to comment

Leave a Reply

Your email address will not be published. Required fields are marked *