ಬೆಂಗಳೂರು: ಬಿಜೆಪಿಯಲ್ಲಿ ಈಗ ಸವದಿ ಸಸ್ಪೆನ್ಸ್ ಜೋರಾಗಿದೆ. ಫೆಬ್ರವರಿ 20ಕ್ಕೆ ಡಿಸಿಎಂ ಲಕ್ಷ್ಮಣ ಸವದಿಗೆ ಡೆಡ್‍ಲೈನ್. ಅಲ್ಲಿಯವರೆಗೆ ಅವರು ಪರಿಷತ್ ಸದಸ್ಯರಾಗಿ ಚುನಾಯಿತರಾಗಬೇಕಿದೆ. ಯಡಿಯೂರಪ್ಪ ಕ್ಯಾಬಿನೆಟ್‍ನಲ್ಲಿ ಸವದಿ ಇರ್ತಾರಾ ಅಥವಾ ಔಟ್ ಆಗ್ತಾರಾ ಅನ್ನೋ ಕುತೂಹಲ ಮನೆ ಮಾಡಿದೆ.
ಅಂದಹಾಗೆ ಫೆಬ್ರವರಿ 20ಕ್ಕೆ ಲಕ್ಷ್ಮಣ ಸವದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ 6 ತಿಂಗಳಾಗುತ್ತದೆ. ಸಚಿವರಾದವರು 6 ತಿಂಗಳೊಳಗೆ ಪರಿಷತ್‍ಗೆ ಆಯ್ಕೆಯಾಗಬೇಕು. ಕಾಂಗ್ರೆಸ್ ಪರಿಷತ್ ಸದಸ್ಯ ರಿಜ್ವಾನ್ ಅರ್ಷಾದ್ ರಿಂದ ತೆರವಾಗುವ ಸ್ಥಾನಕ್ಕೆ ಸವದಿ ಸ್ಪರ್ಧೆ ಮಾಡುತ್ತಾರೆ ಎನ್ನಲಾಗಿದೆ. ಈ ನಡುವೆ ನೂತನ ಶಾಸಕ ರಿಜ್ವಾನ್ ಅರ್ಷಾದ್ ಇನ್ನೂ ಪ್ರಮಾಣ ವಚನ ಸ್ವೀಕರಿಸಿಲ್ಲ. ನೂತನ ಶಾಸಕ ರಿಜ್ವಾನ್ ಅರ್ಷಾದ್ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರೆ ಪರಿಷತ್ ಸ್ಥಾನ ಅದೇ ತೆರವಾಗುತ್ತದೆ. ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಅಂತ ನಿಯಮವೇನಿಲ್ಲ. ಆದರೆ ಶಾಸಕರಾಗಿಯೇ ಇನ್ನೂ ಪ್ರಮಾಣ ವಚನ ಸ್ವೀಕರಿಸಿದ ರಿಜ್ವಾನ್ ಅರ್ಷಾದ್ ನಡೆ ಸವದಿಗೆ ಸಂಕಟ ತಂದಿದೆ.
Advertisement
Advertisement
ಅಷ್ಟೇ ಅಲ್ಲ ಒಂದು ವೇಳೆ ಜನವರಿಯಲ್ಲಿ ರಿಜ್ವಾನ್ ಅರ್ಷಾದ್ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರೂ ಎಲೆಕ್ಷನ್ ದಿನಾಂಕ ಸಮಸ್ಯೆ ಎದುರಾಗಲಿದೆ. ಸದಸ್ಯ ಸ್ಥಾನ ತೆರವಾದ 6 ತಿಂಗಳೊಳಗೆ ಚುನಾವಣೆ ನಡೆಸಲು ಅವಕಾಶ ಇರುತ್ತೆ. ಹಾಗಾಗಿ ತರಾತುರಿಯಲ್ಲಿ ಚುನಾವಣೆ ನಡೆಸುತ್ತಾ ಚುನಾವಣಾ ಆಯೋಗ ಅನ್ನೋ ಆತಂಕ ಕೂಡ ಸವದಿ ಅವರದ್ದಾಗಿದೆ. ಈ ನಡುವೆ ಪಕ್ಷದ ವಲಯದಲ್ಲೂ ಪರಿಷತ್ ಎಲೆಕ್ಷನ್ ಬಗ್ಗೆ ಸೈಲೆಂಟ್ ಆಗಿದ್ದು, ಸವದಿ ಅವಧಿ ಹತ್ತಿರ ಬರುತ್ತಿದ್ದರೂ ಬಿಜೆಪಿ ನಾಯಕರು ತಲೆಕೆಡಿಸಿಕೊಳ್ಳದಿರೋದು ಸವದಿ ಸಂಕಟ ಜೋರಾಗಲು ಕಾರಣವಾಗಿದೆ.