– ಟಿಪ್ಪು ಪಠ್ಯ ತೆಗ್ದು ಹಾಕೋ ವಿಷ್ಯದಲ್ಲಿ ಗೊಂದಲವಿಲ್ಲ
ಬೆಂಗಳೂರು: ತಾಲೂಕಿಗೊಂದು ಮೆಡಿಕಲ್ ಕಾಲೇಜು ಕೋಡೋಕ್ಕಾಗಲ್ಲ ಎಂದು ಹೇಳುವ ಮೂಲಕ ಸಿಎಂ ಯಡಿಯೂರಪ್ಪ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಶಾಕ್ ನೀಡಿದ್ದಾರೆ.
ಇಂದು ನಗರದಲ್ಲಿ ಮಾತನಾಡಿದ ಅವರು, ಮೆಡಿಕಲ್ ಕಾಲೇಜು ಸಂಬಂಧ ಗೊಂದಲ ಇಲ್ಲ. ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಎಂದು ಈಗಾಗಲೇ ನಿರ್ಧರಿಸಲಾಗಿದೆ. ಹೀಗಿರುವಾಗ ತಾಲೂಕಿಗೆ ಒಂದು ಕಾಲೇಜು ಕೊಡಕ್ಕಾಗುತ್ತಾ? ಇದರ ಬಗ್ಗೆ ನಾನು ಡಿ.ಕೆ ಶಿವಕುಮಾರ್ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.
ಇದೇ ವೇಳೆ ಟಿಪ್ಪು ಪಠ್ಯದ ವಿಚಾರದ ಬಗ್ಗೆ ಮಾತನಾಡಿದ ಅವರು, ಟಿಪ್ಪು ಪಠ್ಯ ಬಗ್ಗೆ ಯಾವುದೇ ಗೊಂದಲ ಇಲ್ಲ. ಇಂದು ಬೆಳಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಬಂದಿದ್ದರು. ಟಿಪ್ಪು ಸುಲ್ತಾನ್ ಪಠ್ಯದ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಒಂದು ಸಮಿತಿ ಮಾಡಿದ್ದಾರೆ. ಆ ಸಮಿತಿ ವರದಿ ಬಂದ ಬಳಿಕ ನಿರ್ಧಾರ ತೆಗೆದುಕೊಳ್ಳುತ್ತೇವೆ. ಇದರಲ್ಲಿ ಗೊಂದಲ ಏನೂ ಇಲ್ಲ. ಟಿಪ್ಪು ಸುಲ್ತಾನ್ ಸಂಬಂಧ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದರು.
ನೆರೆಪರಿಹಾರ ವಿಚಾರದಲ್ಲಿ ಸಿದ್ದರಾಮಯ್ಯನವರ ಟೀಕೆಗೆ ತಿರುಗೇಟು ನೀಡಿದ ಬಿಎಸ್‍ವೈ, ನಾವು ಮಾಡಿರುವ ಕೆಲಸದ ಬಗ್ಗೆ ವಿವರವಾಗಿ ಜಾಹೀರಾತು ಕೊಡಲಾಗಿದೆ. ಸಿದ್ದರಾಮಯ್ಯ ಅವರು ಸರ್ಕಾರ ಸತ್ತು ಹೋಗಿದೆ ಎಂದು ಆರೋಪ ಮಾಡಿದ್ದಾರೆ. ಈಗಾಗಲೇ ಕೇಂದ್ರದ ಸಚಿವರಾದ ನಿರ್ಮಲಾ ಸೀತಾರಾಮನ್ ನಿನ್ನೆ ಬಂದಾಗಲೂ ನೆರೆ ಸ್ಥಿತಿಗತಿ ಬಗ್ಗೆ ತಿಳಿಸಿದ್ದೇನೆ. ನಿರ್ಮಲಾ ಸೀತಾರಾಮನ್ ಇನ್ನಷ್ಟು ಸಹಕಾರ ಕೊಟ್ಟರೆ ಪರಿಹಾರ ಕಾರ್ಯ ಮತ್ತಷ್ಟೂ ವೇಗವಾಗಿ ಮಾಡಬಹುದು. ರಾಜ್ಯ ಸರ್ಕಾರ ನೆರೆ ಪರಿಹಾರ ಕಾಮಗಾರಿ ಉತ್ತಮವಾಗಿ ಮಾಡುತ್ತಿದೆ ಎಂದು ತಿಳಿಸಿದರು.