ಬೆಂಗಳೂರು: ಸಿನಿಮೀಯ ರೀತಿಯಲ್ಲಿ ಬಸ್ಸನ್ನು ಹಿಂಬಾಲಿಸಿಕೊಂಡು ಹೋಗಿ ಬಿಎಂಟಿಸಿ (BMTC) ಬಸ್ ಚಾಲಕನ ಮೇಲೆ ಬೈಕ್ ಸವಾರ ಹಲ್ಲೆ ಮಾಡಿರುವ ಘಟನೆ ನಗರದ ಮೈಸೂರು ರಸ್ತೆಯ (Mysuru Road) ಹಳೆಗುಡ್ಡದಹಳ್ಳಿ (Haleguddadahalli) ಬಳಿ ನಡೆದಿದೆ.
ಆರೋಪಿಯನ್ನು ಮಲ್ಲೇಶ್ವರಂ (Malleshwaram) ನಿವಾಸಿಯಾಗಿರುವ 36 ವರ್ಷದ ಕಮಲ್ ಸಿಂಗ್ ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.ಇದನ್ನೂ ಓದಿ: ಪ್ರೇಯಸಿ ತಾಯಿಗಾಗಿ ಚೈನ್ ಕಳ್ಳತನ – ಡ್ಯಾನ್ಸ್ ಮಾಸ್ಟರ್ ಅರೆಸ್ಟ್
ದೀಪಾಂಜಲಿನಗರದ (Deepanjali Nagar) ಡಿಪೋ ನಂ.16ಕ್ಕೆ ಸೇರಿದ ಕೆಎ-47ಎಫ್4034 ಬಸ್ಸು 60ಅ/8 ವಿಜಯನಗರದಿಂದ ಜಯನಗರ ಸಂಚಾರ ಮಾಡುತ್ತಿದ್ದ ವೇಳೆ ಬಸ್ಸಿನ ಚಾಲಕ ಮುರ್ತುಜಾ ಸಾಬ್ ಎಂಬವರ ಮೇಲೆ ಹಲ್ಲೆ ನಡೆದಿದೆ. ಕಳೆದ ಮೂರು ತಿಂಗಳಲ್ಲಿ 6 ಹಲ್ಲೆ ಪ್ರಕರಣ ನಡೆದಿದ್ದು, ನವೆಂಬರ್ ತಿಂಗಳಲ್ಲಿ ನಡೆದ ಮೊದಲ ಘಟನೆ ಇದಾಗಿದೆ.
ಮಲ್ಲೇಶ್ವರಂನಲ್ಲಿ ಬೈಕ್‌ಗೆ ಬಿಎಂಟಿಸಿ ಬಸ್ ತಾಗಿದೆ. ಇದರಿಂದ ರೊಚ್ಚಿಗೆದ್ದ ಸವಾರ ಚಾಲಕನ ಜೊತೆ ಕಿರಿಕ್ ಮಾಡಿಕೊಂಡಿದ್ದಾನೆ. ಬಳಿಕ ಅಲ್ಲಿಂದ 8 ಕಿ.ಮೀ ಹಿಂಬಾಲಿಸಿಕೊಂಡು ಬಂದು ಗುಡ್ದದಹಳ್ಳಿಯ ಸಿಗ್ನಲ್‌ನಲ್ಲಿ ಬಸ್ ನಿಲ್ಲುತ್ತಿದ್ದಂತೆ ಚಾಲಕನ ಮೇಲೆ ಹಲ್ಲೆ ಮಾಡಿದ್ದಾನೆ. ಸದ್ಯ ಚಾಲಕ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿ, ಕಳೆದ 3 ಪ್ರಕರಣಗಳಲ್ಲಿ 0.01% ರಷ್ಟೂ ನಮ್ಮ ಬಿಎಂಟಿಸಿ ಸಿಬ್ಬಂದಿ ತಪ್ಪಿರಲಿಲ್ಲ. ಚಾಲಕ, ನಿರ್ವಾಹಕರ ಮೇಲೆ ದುಂಡಾ ವರ್ತನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನಾನು ಈಗಾಗಲೇ ಎಂಡಿಯವರಿಗೆ ಸೂಚನೆ ಕೊಟ್ಟಿದ್ದೇನೆ. ಕಠಿಣ ಕ್ರಮ ಜರುಗಿಸಲು ಸೂಚಿಸಲಾಗಿದೆ. ಭಾನುವಾರ ರಾತ್ರಿ ನಡೆದಿರುವ ಘಟನೆಯ ಬಗ್ಗೆ ತಿಳಿದುಕೊಳ್ಳುತ್ತೇನೆ ಎಂದು ಮಾಹಿತಿ ನೀಡಿದರು.ಇದನ್ನೂ ಓದಿ: ಮೈಸೂರಿನ ಸರ್ಕಾರಿ ಶಾಲೆ ಜಾಗ ವಕ್ಫ್ ಆಸ್ತಿ – ಅಭಿನಂದನೆಗಳು ಸರ್ ಎಂದು ಸಿಎಂಗೆ ಪ್ರತಾಪ್ ಸಿಂಹ ಟಾಂಗ್