ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಬಿಗ್ ಝೀರೋ ವಿಷಯದ ಕುರಿತು ಸ್ವಾರಸ್ಯಕರ ಚರ್ಚೆ ನಡೆಯಿತು. ಯಡಿಯೂರಪ್ಪ ಇಲ್ಲದ ಬಿಜೆಪಿ ಬಿಗ್ ಝೀರೋ ಎನ್ನುವ ವಿಷಯದ ಮೇಲೆ ಚರ್ಚೆ ನಡೆದರೂ ಯಡಿಯೂರಪ್ಪ ಇಲ್ಲದ ಬಿಜೆಪಿ ಶೂನ್ಯ ಎನ್ನುವುದನ್ನು ಒಪ್ಪಿಕೊಳ್ಳಲು ಬಿಜೆಪಿ ಸದಸ್ಯರು ಹಿಂದೇಟು ಹಾಕಿದರು.
ವಿಧಾನ ಪರಿಷತ್ ಕಲಾಪದಲ್ಲಿ ಇಂದು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಯಡಿಯೂರಪ್ಪ ಅವರ ಶಕ್ತಿಯ ಬಗ್ಗೆ ವಿಷಯ ಪ್ರಸ್ತಾಪವಾಯಿತು. ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಪಕ್ಷದಲ್ಲಿ ಯಡಿಯೂರಪ್ಪ ಅವರನ್ನು ನಿಯಂತ್ರಿಸುವ ಪ್ರಯತ್ನ ಮತ್ತೆ ನಡೆಯುತ್ತಿದೆ. ಹಿಂದೆ ಆಳುವ ಪಕ್ಷವಾಗಿದ್ದ ಬಿಜೆಪಿ ಯಡಿಯೂರಪ್ಪ ಪಕ್ಷ ಬಿಟ್ಟ ನಂತರ ವಿರೋಧ ಸ್ಥಾನವೂ ಸಿಗದಂತೆ ಆಗಿತ್ತು. ಹೀಗಾಗಿ ಬಿಜೆಪಿ ಮೈನಸ್ ಯಡಿಯೂರಪ್ಪ ಬಿಗ್ ಝೀರೋ ಅಂತ ಪಾಟೀಲ್ ಹೇಳಿದರು.
Advertisement
Advertisement
ಈ ವೇಳೆ ಬಿಜೆಪಿ ಸದಸ್ಯೆ ತೇಜಸ್ವಿನಿ ರಮೇಶ್, ಸಿದ್ದರಾಮಯ್ಯ ಮೈನಸ್ ಕಾಂಗ್ರೆಸ್ ಜೀರೋ ಅಂತಾ ಒಪ್ಪಿಕೊಳ್ತೀರಾ? ಯಡಿಯೂರಪ್ಪ ದೈತ್ಯ ಶಕ್ತಿ. ಯಡಿಯೂರಪ್ಪ ಬಿಜೆಪಿ ಜೊತೆ ಇದ್ದರೆ ಸಂಖ್ಯೆಯ ಬಲಗಡೆಯ ಝೀರೋ ಇರಲಿದೆ, ಅವರನ್ನು ಇಳಿಸುವಾಗ ಈ ಕಾಳಜಿ ಇರಲಿಲ್ಲವೇ?. ನಾಯಕರು ಮತ್ತು ಪಕ್ಷ ಸೇರಿದಾಗಲೇ ಪಕ್ಷ ಬಲಗೊಳ್ಳುವುದು, ಸೋನಿಯಾಗಾಂಧಿ, ಕುಮಾರಸ್ವಾಮಿ, ಝೀರೋ ಅಂದರೆ ಒಪ್ಪಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿ ಮಾಡಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಜೆಡಿಎಸ್ ನ ಬಸವರಾಜ ಹೊರಟ್ಟಿ, ಅದೆಲ್ಲಾ ಬೇಡ ಯಡಿಯೂರಪ್ಪ ಮೈನಸ್ ಬಿಜೆಪಿ ಝೀರೋ ಹೌದೋ ಅಲ್ಲವೋ ಅನ್ನುವುದನ್ನು ಹೇಳಿ ಎಂದರು.
Advertisement
ಈ ವೇಳೆ ಎದ್ದ ಬಿಜೆಪಿ ಸದಸ್ಯ ಪ್ರಾಣೇಶ್, ನಮ್ಮಲ್ಲಿ ಎಲ್ಲರೂ ನಾಯಕರೇ. ಹಿಂದೆ ಅಟಲ್ ಬಿಹಾರಿ ವಾಜಪೇಯಿ ನಮ್ಮ ಹೀರೋ ಆಗಿದ್ದರು. ಈಗ ನರೇಂದ್ರ ಮೊದಿ ನಮ್ಮ ಹೀರೋ ಆಗಿದ್ದಾರೆ. ಹಾಗೆಯೇ ಇಲ್ಲಿಯೂ ಈಗ ಯಡಿಯೂರಪ್ಪ ನಮ್ಮ ಹೀರೋ ನಂತರದಲ್ಲಿ ಮುಂದೆ ಬರುವವರು ನಮ್ಮ ಹೀರೋ. ನಮ್ಮದು ಕುಟುಂಬ ರಾಜಕಾರಣದ ಪಕ್ಷ ಅಲ್ಲ. ಒಂದು ಕುಟುಂಬದವರೇ ಹೀರೋ ಅಲ್ಲ ಎಂದು ತಿರುಗೇಟು ನೀಡಿದರು.
Advertisement
ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ನಾನು ನಮಗೆ ಅನಿಸಿದ್ದು ಹೇಳಿದ್ದೇನೆ ಯಡಿಯೂರಪ್ಪ ಮೈನಸ್ ಬಿಜೆಪಿ ಝೀರೋ ಅಲ್ಲ ಅಂದರೆ ಇಲ್ಲ ಅಂತಾ ಹೇಳಿ ನಮಗೇನು ಅಭ್ಯಂತರ ಇಲ್ಲ ಎಂದು ಬಿಜೆಪಿ ಸದಸ್ಯರ ಕೆರಳಿಸುವ ಪ್ರಯತ್ನ ನಡೆಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ಲೆಹರ್ ಸಿಂಗ್, ಕಾಂಗ್ರೆಸ್ ಪಕ್ಷವೇ ಬಿಗ್ ಝೀರೋ ಆಗಿದೆ. ಹಾಗಾಗಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ತರಹದ ನಾಯಕರು ಅಲ್ಲಿ ಜೀರೋ ಆಗಿದ್ದಾರೆ ಅವರು ಅಲ್ಲಿಂದ ಹೊರ ಬಂದರೆ ನಾಯಕರಾಗುತ್ತಾರೆ ಎಂದರು ಅಂತ ಕಾಂಗ್ರೆಸ್ ಕಾಲೆಳೆದ್ರು. ಲೆಹರ್ ಸಿಂಗ್ ಆರೋಪವನ್ನು ತಳ್ಳಿಹಾಕಿದ ಎಸ್.ಆರ್.ಪಾಟೀಲ್, ಕಾಂಗ್ರೆಸ್ ಪಕ್ಷವನ್ನು ಶೂನ್ಯ ಅಂತಾರೆ ಆದರೆ ಸ್ವಾತಂತ್ರ್ಯ ತಂದ ಪಕ್ಷ ನಮ್ಮದು ಸಂವಿಧಾನ ಕೊಟ್ಟ ಪಕ್ಷ ನಮ್ಮದು ಹಾಗಾಗಿ ನಮಗೆ ನಮ್ಮ ಪಕ್ಷದ ಬಗ್ಗೆ ಹೆಮ್ಮೆ ಇದೆ ಎಂದು ಬಿಗ್ ಜೀರೋ ಚರ್ಚೆಗೆ ತೆರೆ ಎಳೆದರು.