-ನಂಬರ್ 1 ಸ್ಥಾನದಲ್ಲಿ ಕಟೀಲ್
-ನಂಬರ್ 2 ಸ್ಥಾನದಲ್ಲಿ ಬಿಎಸ್‍ವೈ
ಬೆಂಗಳೂರು: ರಾಜ್ಯ ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಈ ಬಾರಿಯ ಉಪಚುನಾವಣೆಗೆ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಪ್ರಕಟವಾಗಿದ್ದು, ಬಿಜೆಪಿ 40 ಜನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ನಂಬರ್ 1 ಸ್ಥಾನವನ್ನು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೀಡಿದ್ದು, ಸಿಎಂ ಬಿಎಸ್‍ವೈ ಅವರನ್ನು ಎರಡನೇ ಸ್ಥಾನಕ್ಕೆ ತಳ್ಳಲಾಗಿದೆ.

ಈ ಬಾರಿಯ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಭಾರೀ ಬದಲಾವಣೆ ಮಾಡಿದ್ದು, ಪಟ್ಟಿಯಲ್ಲಿ ನಟ ಜಗ್ಗೇಶ್, ಸಂಸದ ತೇಜಸ್ವಿ ಸೂರ್ಯಗೆ ಕೊಕ್ ನೀಡಲಾಗಿದೆ. ಇವರ ಜೊತೆ ಸಂಸದ ಅನಂತ್ ಕುಮಾರ್ ಹೆಗಡೆ ಮತ್ತು ನಟಿ ಮಾಳವಿಕಾ ಅವರಿಗೂ ಕೊಕ್ ನೀಡಿದ್ದಾರೆ. ಕಳೆದ ಸಲ ಅನಂತ್ ಕುಮಾರ್ ಹೆಗಡೆ ಸ್ಟಾರ್ ಪ್ರಚಾರಕರಾಗಿದ್ದರು. ಆದರೆ ವಿವಾದಾತ್ಮಕ ಹೇಳಿಕೆಗಳನ್ನು ಕೊಡುವ ಹಿನ್ನೆಲೆಯಲ್ಲಿ ಅನಂತ್ ಕುಮಾರ್ ಅವರ ಹೆಸರನ್ನು ಕೈಬಿಡಲಾಗಿದೆ ಎನ್ನಲಾಗಿದೆ.

ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಹಿರಿಯ ನಾಯಕರಾದ ಎಸ್.ಎಂ ಕೃಷ್ಣ ಮತ್ತು ಸಂಸದ ವಿ ಶ್ರೀನಿವಾಸ್ ಪ್ರಸಾದ್ ಹೆಸರನ್ನು ಕೈಬಿಡಲಾಗಿದೆ. ಈ ಪಟ್ಟಿಯಲ್ಲಿ, ನಳಿನ್ ಕುಮಾರ್ ಕಟೀಲ್ ಅವರಿಗೆ ಮೊದಲ ಸ್ಥಾನ ನಂತರ ಬಿ.ಎಸ್.ಯಡಿಯೂರಪ್ಪ ಎರಡನೇ ಸ್ಥಾನ ನೀಡಲಾಗಿದೆ. ಇವರನ್ನು ಬಿಟ್ಟರೆ ಡಿ.ವಿ ಸದಾನಂದಗೌಡ, ಪ್ರಹ್ಲಾದ್ ಜೋಶಿ, ಬಿ.ಎಲ್ ಸಂತೋಷ್, ಮುರುಳೀಧರರಾವ್, ಅರುಣ್ ಕುಮಾರ್, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಮತ್ತು ಗೋವಿಂದ ಕಾರಜೋಳ ಮೊದಲ ಹತ್ತು ಸ್ಥಾನದಲ್ಲಿ ಇದ್ದಾರೆ.

ಕೇಂದ್ರ ಸಚಿವರು ಮತ್ತು ರಾಜ್ಯ ಸಚಿವರಿಗಿಂತ ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ್ ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದ್ದು, ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ 26 ನೇ ಸ್ಥಾನವನ್ನು ಸುರಾನ್ ಗೆ ನೀಡಲಾಗಿದೆ. ನಂತರ 27 ನೇ ಸ್ಥಾನವನ್ನು ಸಚಿವೆ ಶಶಿಕಲಾ ಜೊಲ್ಲೆಗೆ, 28 ನೇ ಸ್ಥಾನವನ್ನು ಕೇಂದ್ರ ರಾಜ್ಯ ರೈಲ್ವೆ ಸಚಿವ ಸುರೇಶ್ ಅಂಗಡಿ ಅವರಿಗೆ ನೀಡಲಾಗಿದೆ.
