ಬೆಂಗಳೂರು: ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಭೇಟಿಯಾಗಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ರಾಹುಲ್ ದ್ರಾವಿಡ್ ನಿವಾಸಕ್ಕೆ ಭೇಟಿ ನೀಡಿದ ನಡ್ಡಾ ಅವರಿಗೆ ಕೇಂದ್ರ ಸಚಿವ ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಅರುಣ್ ಕುಮಾರ್ ಸೇರಿದಂತೆ ಹಲವರು ಸಾಥ್ ನೀಡಿದರು. ಈ ವೇಳೆ ಬಿಜೆಪಿ ನಾಯಕರು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ರದ್ದು ಮಾಡಿರುವ ಕುರಿತಾದ ಪುಸ್ತಕವನ್ನು ನೀಡಿದ್ದಾರೆ.
Advertisement
ಭೇಟಿಯ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸದಾನಂದಗೌಡ ಅವರು, 70 ವರ್ಷದ ನಂತರ ಐತಿಹಾಸಿಕ ನಿರ್ಣಯವನ್ನು ಪ್ರಧಾನಿ ಮೋದಿ ಸರ್ಕಾರ ತೆಗೆದುಕೊಂಡಿದೆ. ದೇಶದ ಐಕ್ಯತೆ ಧಕ್ಕೆಯಾಗಿದ್ದ ನಿಯಮಾವಳಿಗಳನ್ನು ತೆಗೆದುಹಾಕಲಾಗಿದೆ. ಆದರೆ ಇದು ಯಾಕಾಯ್ತು, ಏನಾಯ್ತು ಎನ್ನುವುದು ಸಣ್ಣಪುಟ್ಟ ಕೊಂದಲಗಳಿವೆ. ಈ ನಿರ್ಣಯದ ಕುರಿತು ಜನರಿಗೆ ತಿಳಿಸಬೇಕಿ ಎಂದು ಹೇಳಿದರು.
Advertisement
Advertisement
ರಾಹುಲ್ ದ್ರಾವಿಡ್ ಪಾಕಿಸ್ತಾನ ಸೇರಿದಂತೆ ದೇಶ, ವಿದೇಶಗಳಲ್ಲಿ ಕ್ರಿಕೆಟ್ ಆಡಿದವರು. ಕಾಶ್ಮೀರದ ಮೈದಾನದಲ್ಲೂ ಕ್ರಿಕೆಟ್ ಆಡಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಕ್ರಿಕೆಟ್ ಮಂಡಳಿಗಳಿವೆ. ಆದರೆ ಕಾಶ್ಮೀರದಲ್ಲಿ ಕ್ರಿಕೆಟ್ ಮಂಡಳಿ ಮಾಡುವುದಕ್ಕೆ ಬಿಡಲಿಲ್ಲ ಅಂತ ದ್ರಾವಿಡ್ ತಿಳಿಸಿದ್ದಾರೆ ಎಂದರು.
Advertisement
ದೇಶದಲ್ಲಿ ಪ್ರಮುಖರನ್ನು ಭೇಟಿ ಮಾಡಲಾಗುತ್ತಿದೆ. ಮೊನ್ನೆಯಷ್ಟೇ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ, ಬನ್ನಂಜೆ ಗೋವಿಂದ ಆಚಾರ್ಯ ಸೇರಿದಂತೆ ಹಲವರನ್ನು ಭೇಟಿಯಾಗಿದ್ದೇವೆ. ದೇಶದ ಏಕತೆಗೆ ಒತ್ತು ನೀಡಲು ಹಾಗೂ ಒಂದು ದೇಶ ಒಂದು ಸಂವಿಧಾನ ಇರಬೇಕು ಎನ್ನವುದು ಉದ್ದೇಶದಿಂದ ಶ್ರಮಿಸುತ್ತಿದ್ದೇವೆ ಎಂದು ಸದಾನಂದ ಗೌಡ ತಿಳಿಸಿದರು.
ಪ್ರವಾಹ ಪರಿಹಾರ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವರು, ರಾಜ್ಯಕ್ಕೆ ಅಲೌಟ್ ಆದ ಹಣ ಡಿಸೆಂಬರ್ ನಲ್ಲಿ ಬರಬೇಕಿತ್ತು. ಆದರೆ ಈಗಾಗಲೇ 380 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಕರ್ನಾಟಕ ಮಾತ್ರವಲ್ಲ ಕೇರಳ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಭೀಕರ ಪ್ರವಾಹ ಉಂಟಾಗಿದೆ. ಅಲ್ಲಿಗೂ ಕೂಡ ಪರಿಹಾರ ನೀಡಬೇಕಿದೆ ಎಂದು ಹೇಳಿದರು.
ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ತೆರವು ಆದ ಸ್ಥಾನಕ್ಕೆ ಆರು ತಿಂಗಳೊಳಗೆ ಚುನಾವಣೆ ಆಗಬೇಕು. ಯಾವತ್ತೂ ಸರ್ಕಾರ ರಚನೆ ಮಾಡಿದ್ವೋ, ಅಂದಿನಿಂದಲೇ ಉಪ ಚುನಾವಣೆಗೆ ಸಿದ್ಧರಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ 25+1 ಗೆದ್ದಂತೆ, 15ಕ್ಕೆ 15 ಸ್ಥಾನಗಳನ್ನೂ ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.