ಬೆಂಗಳೂರು: ಡಿ.ಕೆ ಶಿವಕುಮಾರ್ ಬಂಧನದ ಬಗ್ಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಸಾಫ್ಟ್ ಹೇಳಿಕೆ ನೀಡಿರುವುದಕ್ಕೆ ಬಿಜೆಪಿ ಹೈಕಮಾಂಡ್ ಬಿಎಸ್‍ವೈ ಮೇಲೆ ಗರಂ ಆಗಿದೆ.
ಇಡಿ ಇಂದ ಬಂಧನಕ್ಕೆ ಒಳಗಾದ ಡಿಕೆಶಿ ಬಂಧನದ ಹಿನ್ನೆಲೆ, ಡಿಕೆಶಿ ಬಂಧನ ನಮಗೆ ಸಂತೋಷ ತಂದಿಲ್ಲ ಎಂದು ಹೇಳಿಕೆ ನೀಡಿದ್ದ ಸಿಎಂ ವಿರುದ್ಧ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್‍ರಿಂದ ಹೈಕಮಾಂಡ್‍ಗೆ ವರದಿ ಹೋಗಿದ್ದು, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕಿಡಿ ಕಾರಿದ್ದಾರೆ ಎನ್ನಲಾಗಿದೆ.
ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವ ಡಿಕೆಶಿ ವಿಚಾರದ ಬಗ್ಗೆ ಯಡಿಯೂರಪ್ಪ, ಡಿಕೆಶಿ ಬಂಧನ ನಮಗೆ ಸಂತೋಷ ತಂದಿಲ್ಲ. ಆರೋಪ ಮುಕ್ತರಾಗಿ ಬಂದರೆ ನಾನು ಸಂತೋಷ ಪಡುತ್ತೇನೆ ಎಂದು ಹೇಳಿದ್ದರು. ಈಗ ಬಿಎಸ್‍ವೈ ಈ ಹೇಳಿಕೆಯಿಂದ ರಾಷ್ಟ್ರೀಯ ಬಿಜೆಪಿಗೆ ಇನ್ನಿಲ್ಲದ ಮುಜುಗರವಾಗಿದೆ. ಈ ವಿಚಾರವಾಗಿ ಬಿಎಸ್‍ವೈ ನಡೆಯ ಬಗ್ಗೆ ವರದಿ ತರಿಸಿಕೊಂಡ ಬಿಜೆಪಿ ಹೈಕಮಾಂಡ್ ಫುಲ್ ಗರಂ ಆಗಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಕಾಂಗ್ರೆಸ್ ದೇಶದಲ್ಲೆಡೆ ಮೋದಿ, ಅಮಿತ್ ಷಾ ಭಾವಚಿತ್ರ ಹಿಡಿದು ಆಕ್ರೋಶ ವ್ಯಕ್ತಪಡಿಸುತ್ತಿದೆ. ಕರ್ನಾಟಕದಲ್ಲೂ ಅಮಿತ್ ಷಾ, ಮೋದಿ ಜೋಡಿಯ ಭಾವಚಿತ್ರಕ್ಕೆ ಬೆಂಕಿ ಹಾಕಿ ಪ್ರತಿಭಟನೆ ಮಾಡುತ್ತಿದ್ದಾರೆ. ಇಷ್ಟಾದರೂ ಯಡಿಯೂರಪ್ಪ ಮಾತ್ರ ಡಿಕೆಶಿ ಬಗ್ಗೆ ಸಾಫ್ಟ್ ಹೇಳಿಕೆ ಕೊಟ್ಟು ಸೈಲೆಂಟ್ ಆಗಿದ್ದಾರೆ.
ಬಿಎಸ್‍ವೈ ಹೇಳಿದ್ದು ಏನು?
ಮಾಜಿ ಸಚಿವರ ಬಂಧನ ಆಗಿರುವ ಬಗ್ಗೆ ನನಗೇನು ಸಂತೋಷವಾಗಿಲ್ಲ. ಇದೆಲ್ಲದರಿಂದ ಅವರು ಆದಷ್ಟು ಬೇಗ ಹೊರಬರಲಿ. ಡಿ.ಕೆ.ಶಿವಕುಮಾರ್ ಅವರು ಹೊರಬಂದರೆ ಎಲ್ಲರಿಗಿಂತ ನಾನು ಹೆಚ್ಚು ಸಂತೋಷ ಪಡುತ್ತೇನೆ. ಕಾನೂನು ಚೌಕಟ್ಟಿನಲ್ಲಿ ಕೆಲವೊಂದು ನಿರ್ಧಾರ ಆಗಿರುತ್ತದೆ. ಹೀಗಾಗಿ ಬಂಧನ ಆಗಿರಬೇಕು. ನನ್ನ ಜೀವನದಲ್ಲಿ ಯಾರನ್ನೂ ದ್ವೇಷಿಸಿಲ್ಲ, ಕೆಟ್ಟದ್ದನ್ನು ಬಯಸಿಲ್ಲ. ಬಂಧನದಿಂದ ಡಿಕೆಶಿ ಹೊರಬರಲಿ ಅಂತ ದೇವರಲ್ಲಿ ಪಾರ್ಥಿಸುತ್ತೇನೆ ಎಂದು ಮಂಗಳವಾರ ರಾತ್ರಿ ಹೇಳಿಕೆ ನೀಡಿದ್ದರು.