ರಮೇಶ್ ಜಾರಕಿಹೊಳಿ ರಾಜೀನಾಮೆ – ಬಿಜೆಪಿ ಕೋರ್ ಕಮಿಟಿ ಸಭೆಯ ಇನ್‍ಸೈಡ್ ಸ್ಟೋರಿ ಇಲ್ಲಿದೆ

Public TV
3 Min Read
BJP BSY

ಬೆಂಗಳೂರು: ಎಲ್ಲಾ ಕಡೆಯೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ಚರ್ಚೆಯಾಗುತ್ತಿದೆ. ಯಾವುದೇ ಕಾರಣಕ್ಕೂ ಇನ್ನು ಮುಂದೆ ದುಡುಕುವುದು ಬೇಡ. ಸರಿಯಾದ ಪ್ಲಾನ್ ರೂಪಿಸಿ ರೆಬೆಲ್ ಶಾಸಕರನ್ನು ಬಿಜೆಪಿಗೆ ಕರೆ ತರೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದ ಪಕ್ಷದ ಮುಖಂಡರಿಗೆ ತಿಳಿಸಿದ್ದಾರೆ.

ಬಿಎಸ್‍ವೈ ನೇತೃತ್ವದಲ್ಲಿ ಇಂದು ಬಿಜೆಪಿ ಕೋರ್ ಕಮಿಟಿ ಸಭೆ ನಡೆದಿದ್ದು, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಂಸದ ಡಿ.ವಿ.ಸದಾನಂದಗೌಡ, ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿದಂತೆ ಹಲವು ಪ್ರಮುಖರು ಭಾಗಿಯಾಗಿದ್ದರು.

Ramesh Jarkiholiಚಿಂಚೋಳಿ ಮತ್ತು ಕುಂದಗೋಳ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಅಭ್ಯರ್ಥಿ ಆಯ್ಕೆ ಸಭೆ ನಡೆಸಲಾಗಿದೆ ಎಂದು ತಿಳಿಸಿದ್ದರೂ ರಮೇಶ್ ಜಾರಕಿಹೊಳಿ ರಾಜೀನಾಮೆ ಘೋಷಣೆಯಿಂದ ಉಂಟಾಗಿರುವ ರಾಜಕೀಯ ಅಸ್ಥಿರತೆಯ ಲಾಭ ಪಡೆಯುವ ಬಗ್ಗೆ ಭಾರೀ ಚರ್ಚೆ ನಡೆದಿದೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ತಿಳಿದು ಬಂದಿದೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ಬೆನ್ನಲ್ಲೇ ಒಬ್ಬೊಬ್ಬರಾಗಿ ರಾಜೀನಾಮೆ ಕೊಡಲು ಶುರು ಮಾಡುತ್ತಾರೆ. ನಾವು ಆಪರೇಶನ್ ಕಮಲ ಮಾಡುತ್ತಿಲ್ಲ ಎಂದೇ ಮಾಧ್ಯಮಗಳ ಮುಂದೆ ವಾದಿಸಬೇಕು. ಅಪ್ಪಿತಪ್ಪಿಯೂ ಎಡವಟ್ಟು ಹೇಳಿಕೆ ನೀಡುವುದು ಬೇಡ ಎಂದು ಬಿ.ಎಸ್.ಯಡಿಯೂರಪ್ಪ ಅವರು ಪಕ್ಷ ಮುಖಂಡರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

BJP CORE COMMITTEE MEETING

ಸಭೆಯ ಬಳಿಕ ಮಾತನಾಡಿದ ಬಿಎಸ್‍ವೈ, ರಾಜ್ಯದ 22 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಲಿದೆ. ಚಿಂಚೋಳಿ ಮತ್ತು ಕುಂದಗೋಳ ಉಪಚುನಾವಣೆ ಬಗ್ಗೆ ಚರ್ಚೆ ನಡೆದಿದೆ. ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್‍ಗೆ ಕಳುಹಿಸಲಾಗಿದೆ. ಈ ಮೂಲಕ ನಾಳೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುತ್ತದೆ ಎಂದರು.

ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರದ ಬಗ್ಗೆ ನನಗೇನು ಗೊತ್ತಿಲ್ಲ. ಅವರನ್ನೇ ಕೇಳಿ ಎಂದು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು.

ಕುಂದಗೋಳ ಕ್ಷೇತ್ರಕ್ಕೆ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಪ್ರಹ್ಲಾದ್ ಜೋಷಿ ಹಾಗೂ ಗೋವಿಂದ ಕಾರಜೋಳ ಅವರನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ. ಚಿಂಚೋಳಿ ವಿಧಾನಸಭಾ ಕ್ಷೇತ್ರಕ್ಕೆ ವಿ.ಸೋಮಣ್ಣ, ಲಕ್ಷ್ಮಣ ಸವದಿ, ಬಾಬುರಾವ್ ಚಿಂಚನಸೂರ್ ಹಾಗೂ ಮಾಲೀಕಯ್ಯ ಗುತ್ತೇದಾರ್ ಉಸ್ತುವಾರಿ ವಹಿಸಿಕೊಳ್ಳುತ್ತಾರೆ ಎಂದರು.

BJP CORE COMMITTEE MEETING A

ಲೋಕಸಭಾ ಚುನಾವಣೆಯಲ್ಲಿ ಶೇ.68 ರಷ್ಟು ಮತದಾನ ಮಾಡಿದ ಕರ್ನಾಟಕದ ಜನತೆಗೆ ಧನ್ಯವಾದಗಳು. ಚುನಾವಣೆಯ ಬಗ್ಗೆ ಪರಿಶೀಲನೆ ನಡೆಸಿದ್ದು ಬಿಜೆಪಿ 22 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. ಎಲ್ಲಾ ಜಿಲ್ಲಾ ಘಟಕಗಳ ಸಮಿತಿಗಳೂ ಸಹ ವಾರದೊಳಗೆ ವಿಮರ್ಶೆ ಮಾಡಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಅರವಿಂದ ಲಿಂಬಾವಳಿ ತಿಳಿಸಿದರು.

ಮತದಾರರ ಪಟ್ಟಿಯಲ್ಲಿ ಹೆಸರು ಡಿಲೀಟ್ ಆಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಚುನಾವಣಾ ಅಯೋಗಕ್ಕೆ ಸಲ್ಲಿಸಲು ಚರ್ಚೆ ನಡೆಸಲಾಗಿದೆ. ಹಾಸನದಲ್ಲಿ ಪೊಲೀಸ್ ಜೀಪ್‍ನಲ್ಲಿ ಹಣ ಸಾಗಿಸಿದ ಬಗ್ಗೆ ಹಾಗೂ ರಾಜ್ಯದಲ್ಲಿ ಚುನಾವಣಾ ಅಕ್ರಮಗಳ ಕುರಿತು ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

C T Ravi A

ದೆಹಲಿ ಮತ್ತು ವಾರಣಾಸಿ ಸೇರಿದಂತೆ ಅನೇಕ ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರದಲ್ಲಿ ರಾಜ್ಯದ ಬಿಜೆಪಿ ಮುಖಂಡರು ಪಾಲ್ಗೊಳ್ಳುತ್ತಾರೆ. ವಾರಣಾಸಿಯಲ್ಲಿ ಶಾಸಕ ಸಿ.ಟಿ.ರವಿ ನೇತೃತ್ವದ ತಂಡವು ಪ್ರಚಾರಕ್ಕೆ ತೆರಳಲಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ ಮಾತನಾಡಿ, ಚಿಂಚೋಳಿ ಕ್ಷೇತ್ರದ ಉಪಚುನಾವಣೆ ವಿಚಾರವಾಗಿ ಇಂದು ಸಭೆ ಕರೆದು ಎಲ್ಲರ ಅಭಿಪ್ರಾಯ ಪಡೆಯಲಾಗಿದೆ. ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧವಾಗಿದ್ದಾರೆ. ಸುನೀಲ್ ವಲ್ಯಾಪುರೆ, ಉಮೇಶ್ ಜಾಧವ್ ಅವರು ಸೂಚಿಸಿದ ವ್ಯಕ್ತಿ, ಸಂಜೀವನ್ ಯಾಕಾಪುರ್, ರಾಮದೇವ್ ರಾಥೋಡ್ ಸೇರಿದಂತೆ 4 ಜನ ಆಕಾಂಕ್ಷಿಗಳಿದ್ದಾರೆ. ರಾಜ್ಯ ಮುಖಂಡರು ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಿದ್ದಾರೆ ಎಂದರು.

BJP CORE COMMITTEE MEETING B

ಮಾಜಿ ಸಚಿವ ಸುನೀಲ್ ವಲ್ಯಾಪುರೆ ಅವರು ಮಾತನಾಡಿ, ನಾನು ಕೂಡ ಚಿಂಚೋಳಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಪಕ್ಷಕ್ಕಾಗಿ ಹಗಲು ರಾತ್ರಿ ದುಡಿದಿದ್ದೇನೆ ಎಂದರು.

ಚಿಂಚೋಳಿ ಟಿಕೆಟ್ ಆಕಾಂಕ್ಷಿ ಸಂಜೀವ್ ಯಾಕಾಪುರೆ ಮಾತನಾಡಿ, ನಾನು ಕೂಡ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ನಾನು ಎಸ್‍ಸಿ ಸಮುದಾಯಕ್ಕೆ ಸೇರಿದವನು. ನನಗೆ ಟಿಕೆಟ್ ಕೊಟ್ಟರೆ ಸಮುದಾಯಕ್ಕೆ ಹೆಚ್ಚು ಒಲವು ತೋರಿದಂತೆ ಆಗುತ್ತದೆ. ಟಿಕೆಟ್ ಕೊಡುತ್ತಾರೆ ಎಂಬ ನಂಬಿಕೆ ಇದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *