ಬೆಂಗಳೂರು: ಸಚಿವ ಸಂಪುಟ ಈ ತಿಂಗಳಾಂತ್ಯದಲ್ಲಿ ನಡೆದೇ ಬಿಡುತ್ತೆ ಅಂತ ಅನ್ಕೊಂಡಿರೋರಿಗೆ ಶಾಕಿಂಗ್ ನ್ಯೂಸೊಂದು ಹೊರಬಿದ್ದಿದೆ. ಈ ತಿಂಗಳು ಸಂಪುಟ ವಿಸ್ತರಣೆ ಡೌಟು ಎಂಬ ಮಾಹಿತಿ ಲಭ್ಯವಾಗಿದೆ. ಬುಧವಾರ ವಿಸ್ತರಣೆಗೆ ಪ್ಲಾನ್ ಮಾಡಿಕೊಂಡಿದ್ದ ಯಡಿಯೂರಪ್ಪಗೆ ದೆಹಲಿ ಶಾಕ್ ಕಾದಿದೆಯಂತೆ.
ಹೌದು, ಸಂಪುಟ ವಿಸ್ತರಣೆ ಜನವರಿ 29ಕ್ಕೆ ನಡೆಯಲ್ಲ ಅನ್ನುವ ಶಂಕಾಸ್ಪದ ಸುದ್ದಿ ಈಗ ಬಿಜೆಪಿ ಪಾಳಯದಲ್ಲೇ ಓಡಾಡ್ತಿದೆ. ಸಿಎಂ ಯಡಿಯೂರಪ್ಪ ದೆಹಲಿಗೆ ಹೋಗುವ ತನಕ ಸಂಪುಟ ವಿಸ್ತರಣೆ ಬಹುತೇಕ ನಡೆಯಲ್ಲ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಆದರೆ ಯಡಿಯೂರಪ್ಪನವರು ದೆಹಲಿಗೆ ಹೋಗುವ ಲಕ್ಷಣಗಳೇ ಕಾಣುತ್ತಿಲ್ಲ. ವರಿಷ್ಠರು ಸಹ ಸದ್ಯಕ್ಕೆ ಯಡಿಯೂರಪ್ಪನವರನ್ನು ದೆಹಲಿಗೆ ಬುಲಾವ್ ಕೊಡುವ ಸಾಧ್ಯತೆಯೂ ಇಲ್ಲ ಎನ್ನಲಾಗುತ್ತಿದೆ. ನಾಳೆಯೂ ಸಿಎಂ ಯಡಿಯೂರಪ್ಪ ದೆಹಲಿಗೆ ಹೋಗಲ್ಲ. ಯಾಕೆಂದರೆ ನಾಳೆ ಬೆಳಗಾವಿ ಪ್ರವಾಸ ನಿಗದಿಯಾಗಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಸಿಎಂ ಭಾಗವಹಿಸುತ್ತಿದ್ದಾರೆ.
ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಜೆ.ಪಿ ನಡ್ಡಾ ಅವರನ್ನು ಸಿಎಂ ಯಡಿಯೂರಪ್ಪ ಭೇಟಿ ಮಾಡದ ಹೊರತು ಸಂಪುಟ ವಿಸ್ತರಣೆ ಡೌಟು ಎಂದು ಮೂಲಗಳು ಹೇಳುತ್ತಿವೆ. ಜೆ.ಪಿ ನಡ್ಡಾ ಭೇಟಿ ಮಾಡಿ ಸಂಪುಟ ವಿಸ್ತರಣೆಗೆ ಅಧಿಕೃತ ಒಪ್ಪಿಗೆ ಪಡೆಯದಿದ್ರೆ ಹೈಕಮಾಂಡ್ ಮಟ್ಟದಲ್ಲಿ ಯಡಿಯೂರಪ್ಪ ಬಗ್ಗೆ ತಪ್ಪು ಸಂದೇಶವೂ ಹೋಗುವ ಸಾಧ್ಯತೆಯಿದೆ. ಹೀಗಾಗಿ ಅಳೆದು ತೂಗಿ ನೋಡಿದರೂ ಜನವರಿ ಒಳಗೆ ಸಂಪುಟ ವಿಸ್ತರಣೆ ನಡೆಯೋದು ಅನುಮಾನ ಎಂದು ವಿಶ್ಲೇಷಿಸಲಾಗುತ್ತಿದೆ.
ಸಚಿವ ಸ್ಥಾನದ ಆಕಾಂಕ್ಷಿಗಳು ಸಚಿವರಾಗಲು ತುದಿಗಾಲಿನಲ್ಲೇ ನಿಂತಿದ್ದಾರೆ. ಗೆದ್ದ 24 ಗಂಟೆಯಲ್ಲೇ ಎಲ್ಲರನ್ನೂ ಮಂತ್ರಿ ಮಾಡುತ್ತೇವೆ ಎಂದು ಯಡಿಯೂರಪ್ಪ ಭರವಸೆ ಕೊಟ್ಟಿದ್ರು. ಆದರೆ ಗೆದ್ದವರಿಗೆ ಬಿಜೆಪಿ ಹೈಕಮಾಂಡ್ ಶಾಕ್ ಮೇಲೆ ಶಾಕ್ ಕೊಡ್ತಿದೆಯೇ ಹೊರತು ಸಂಪುಟ ವಿಸ್ತರಣೆ ಕುರಿತು ಸ್ಪಷ್ಟತೆ ಕೊಡುತ್ತಿಲ್ಲ. ಪಕ್ಷಾಂತರಿಗಳ ಋಣದಿಂದ ರಚನೆಯಾದ ಸರ್ಕಾರಕ್ಕೆ ಮರಳಿ ಆ ಋಣ ಸಂದಾಯದ ಬಗ್ಗೆ ಏಕಿಷ್ಟು ತಾತ್ಸಾರ ಎಂದು ಜನರೇ ಕೇಳುವಂತಾಗಿದೆ.