ಬೆಂಗಳೂರು: 14 ಶಾಸಕರ ರಾಜೀನಾಮೆ ಪ್ರಕರಣವನ್ನು ಸ್ಪೀಕರ್ ಕಾಯ್ದಿರಿಸಿದ್ದರ ಒಳ ಗುಟ್ಟೇನು. ದೋಸ್ತಿಗಳ ನಡುವೆ ಮತ್ತೊಂದು ಸುತ್ತಿನ ಸಮ್ಮಿಶ್ರ ಆಟಕ್ಕೆ ವೇದಿಕೆ ಸಿದ್ಧವಾಯ್ತಾ ಅನ್ನೋ ಪ್ರಶ್ನೆಯೊಂದು ಇದೀಗ ರಾಜ್ಯ ರಾಜಕೀಯ ವಲಯದಲ್ಲಿ ಹುಟ್ಟಿಕೊಂಡಿದೆ.
14 ಶಾಸಕರ ರಾಜೀನಾಮೆ ನಿಯಮಾನುಸಾರ ಪ್ರಕ್ರಿಯೆಗೆ ಕನಿಷ್ಠ ಒಂದು ವಾರದ ಅಗತ್ಯವಿದೆ. ಈ ಮಧ್ಯದಲ್ಲಿ 14 ಶಾಸಕರು ಬಂಡಾಯ ಬಾವುಟ ಇಳಿಸಿ ವಾಪಾಸ್ ಆಗುವ ನಿರೀಕ್ಷೆ ಇದೆ. ಮೂವರ ತಲೆದಂಡ ಕಂಡು 14 ಜನರು ಪಕ್ಷಕ್ಕೆ ಹಿಂದಿರುಗಿದರೂ ಅಚ್ಚರಿ ಪಡಬೇಕಾಗಿಲ್ಲ. ಈ ಬೆಳವಣಿಗೆ ದೋಸ್ತಿ ನಾಯಕರಿಗೆ ಪ್ಲಸ್ ಆಗಲಿದೆ. ಆದರೆ ಇತ್ತ ಸರ್ಕಾರ ರಚನೆಗೆ ತುದಿಗಾಲಲ್ಲಿ ನಿಂತಿರೋ ಬಿಎಸ್‍ವೈಗೆ ಮಾತ್ರ ಟೆನ್ಶನ್ ಆರಂಭವಾಗಿದೆ.
ಶಾಸಕರ ರಾಜೀನಾಮೆ ಪ್ರಕರಣ ಇತ್ಯರ್ಥ ಆಗದ ಹೊರತು ಹೊಸ ಸರ್ಕಾರ ರಚನೆಯೂ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಇನ್ನೊಂದೆಡೆ ಬಹುತೇಕ ಆಸೆ ಕೈ ಬಿಟ್ಟಿದ್ದ ದೋಸ್ತಿ ನಾಯಕರಿಗೆ ಹೊಸ ರಾಜಕೀಯ ದಾಳ ಉರುಳಿಸಲು ಇದು ವೇದಿಕೆಯಾಗಿದ್ದು, ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ಬೆಳವಣಿಗೆ ಆಗಬಹುದು ಎನ್ನುವಂತಾಗಿದೆ.
ಸ್ಪೀಕರ್ ಅವರು 13 ಮಂದಿಯ ರಾಜೀನಾಮೆ ಅಂಗೀಕರಿಸದೆ ಕಾಯ್ದಿರಿಸಿದ ಬೆಳವಣಿಗೆ ರಾಜ್ಯ ರಾಜಕಾರಣದ ಎದೆ ಬಡಿತ ಹೆಚ್ಚಿಸಿದೆ. ಶಾಸಕರ ರಾಜೀನಾಮೆ ಕಾಯ್ದಿರಿಸಿದ ಬೆಳವಣಿಗೆ ಬಿಜೆಪಿಗೆ ಬಿಸಿ ತುಪ್ಪವಾದರೆ, ದೋಸ್ತಿ ಪಾಲಿಗೆ ಸ್ವಲ್ಪ ಮಟ್ಟಿಗೆ ಆಕ್ಸಿಜನ್ ಸಿಕ್ಕಂತಾಗುವುದು ಸತ್ಯ.