ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಎಂಟ್ರಿ ಇಲ್ಲ. ಈ ಮೂಲಕ ಪಕ್ಕದ ರಾಜ್ಯದವರಾದರೂ ಯಡಿಯೂರಪ್ಪನವರನ್ನು ಬಿಜೆಪಿ ಹೈಕಮಾಂಡ್ ಡೋಂಟ್ ಕೇರ್ ಎನ್ನುತ್ತಿದೆ.
ಹೌದು. ಮಹಾರಾಷ್ಟ್ರ ಚುನಾವಣೆಯ ಪ್ರಚಾರಕ್ಕೆ ಹೈಕಮಾಂಡ್ ಇನ್ನೂ ಬಿಎಸ್‍ವೈಯವರನ್ನು ಕರೆದಿಲ್ಲ. ಹೈಕಮಾಂಡ್ ಗೆ ಯಡಿಯೂರಪ್ಪನವರಿಗಿಂತ ಡಿಸಿಎಂ ಲಕ್ಷ್ಮಣ ಸವದಿಯೇ ಹೆಚ್ಚು ಆಪ್ತರಾಗಿದ್ದಾರೆ. ಯಾಕಂದ್ರೆ ಲಕ್ಷ್ಮಣ ಸವದಿಯವರಿಗೆ ಬೆಳಗಾವಿ ಸಮೀಪದ ಮಹಾರಾಷ್ಟ್ರ ವಿಧಾನಸಭಾ ಕ್ಷೇತ್ರಗಳ ಪರಿಚಯ ಇದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಲಕ್ಷ್ಮಣ ಸವದಿಯನ್ನು ಮಹಾರಾಷ್ಟ್ರ ಚುನಾವಣಾ ಸಹ ಉಸ್ತುವಾರಿ ಮಾಡಿದೆ.
Advertisement
Advertisement
ಸದ್ಯ ಡಿಸಿಎಂ ಅವರು ಮಹಾರಾಷ್ಟ್ರದಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಸ್ಟಾರ್ ಪ್ರಚಾರಕರ ಹೆಸರಿನ ಪಟ್ಟಿಯಲ್ಲಿ ಯಡಿಯೂರಪ್ಪನವರ ಹೆಸರೇ ಇಲ್ಲ. ಮಹಾರಾಷ್ಟ್ರದಲ್ಲಿ ಲಿಂಗಾಯತ ಮತದಾರರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಮಹಾರಾಷ್ಟ್ರದ 13 ಲೋಕಸಭೆ ಕ್ಷೇತ್ರಗಳಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕವಾಗಿವೆ. ಮಹಾರಾಷ್ಟ್ರದ ಒಟ್ಟು ಜನಸಂಖ್ಯೆಯಲ್ಲಿ ಶೇ. 10 ರಷ್ಟು ಲಿಂಗಾಯತರಿದ್ದಾರೆ. ಅಂದಾಜು 1.20 ಕೋಟಿ ಲಿಂಗಾಯತ ಮತಗಳಿವೆ. ಆದರೂ ಲಿಂಗಾಯತ ಮತದಾರರನ್ನು ಸೆಳೆಯಲು ಯಡಿಯೂರಪ್ಪನವರಿಗೆ ಅವಕಾಶ ಇಲ್ಲ.
Advertisement
ಕಳೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ದೇವೇಂದ್ರ ಫಡ್ನವೀಸ್ ನಮ್ಮ ರಾಜ್ಯದಲ್ಲಿ ಬಂದು ಪ್ರಚಾರ ಮಾಡಿದರು. ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿ ಪಡ್ನವೀಸ್ ಗೆ ಬಿಜೆಪಿ ಹೈಕಮಾಂಡ್, ರಾಜ್ಯದಲ್ಲಿ ಪ್ರಚಾರಕ್ಕೆ ಅವಕಾಶ ಕೊಟ್ಟಿತ್ತು. ಆದರೆ ನಮ್ಮ ರಾಜ್ಯದ ಮುಖ್ಯಮಂತ್ರಿಗೆ ಮಹಾರಾಷ್ಟ್ರದಲ್ಲಿ ಪ್ರಚಾರಕ್ಕೆ ಅವಕಾಶ ಇಲ್ಲ. ಬಿಜೆಪಿಯ ಈ ತಾರತಮ್ಯಕ್ಕೆ ಬಿಎಸ್‍ವೈ ಆಪ್ತರಿಂದ ಭಾರೀ ಖಂಡನೆ ವ್ಯಕ್ತವಾಗುತ್ತಿದೆ.
Advertisement
ಇದೇ 21 ರಂದು ಮಹಾರಾಷ್ಟ್ರದಲ್ಲಿ ಮತದಾನ ನಡೆಯಲಿದೆ. ಅಷ್ಟರೊಳಗೆ ಪ್ರಚಾರಕ್ಕೆ ಹೈಕಮಾಂಡ್ ನಿಂದ ಬಿಎಸ್‍ವೈಗೆ ಕರೆ ಬರುತ್ತಾ ಎಂಬುದನ್ನು ಕಾದು ನೋಡಬೇಕಿದೆ.