ಬೆಂಗಳೂರು: ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರ ನಿಧನದಿಂದಾಗಿ ಖಾತೆ ಹಂಚಿಕೆಯನ್ನು ಸೋಮವಾರಕ್ಕೆ ಮುಂದೂಡಲಾಗಿದ್ದು, ಇತ್ತ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಕಟ್ಟಿ ಹಾಕಲು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್ ಸಂತೋಷ್ ಪ್ಲಾನ್ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಹೌದು. ಮೂರು ಡಿಸಿಎಂ ಹುದ್ದೆ ಸೃಷ್ಟಿ ಮೂಲಕ ಯಡಿಯೂರಪ್ಪಗೆ ಬ್ರೇಕ್ ಹಾಕಲು ಸಂತೋಷ್ ಮುಂದಾಗಿದ್ದಾರೆ. ಈ ಮೂರು ಡಿಸಿಎಂ ಹುದ್ದೆಗಳ ಸೃಷ್ಟಿ ಹಿಂದೆ ಹೊಸತೊಂದು ಲೆಕ್ಕಾಚಾರ ಇದೆಯಂತೆ. ಸಿಎಂ ಮಾಡುವ ಜವಾಬ್ದಾರಿಗಳನ್ನೇ ಈ ಮೂರೂ ಡಿಸಿಎಂಗಳಿಗೂ ಸಂತೋಷ್ ಹಂಚುತ್ತಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಹಾಗಿದ್ತೆ ಮೂವರು ಡಿಸಿಎಂಗಳ ಜವಾಬ್ದಾರಿಯೇನು?
ಡಿಸಿಎಂ – 1ನೇ ಯವರಿಗೆ ನಾನಾ ದರ್ಜೆಯ ಅಧಿಕಾರಿಗಳ ವರ್ಗಾವಣೆ ಉಸ್ತುವಾರಿ
ಡಿಸಿಎಂ -2 ನೇ ಯವರಿಗೆ ಆಡಳಿತಾತ್ಮಕ ಜವಾಬ್ದಾರಿಗಳನ್ನು ಹಂಚೋದು
ಡಿಸಿಎಂ -3 ನೇ ಯವರಿಗೆ ಶಾಸಕರ ಅಹವಾಲುಗಳನ್ನು ಸ್ವೀಕರಿಸೋದು, ಬಗೆಹರಿಕೆ ಬಗ್ಗೆ ಗಮನ ಕೊಡೋ ಹೊಣೆ
ಈ ಮೂರೂ ಜವಾಬ್ದಾರಿಗಳೂ ಸಿಎಂಗೆ ಇರಲ್ಲವಂತೆ. ಮೂರೂ ಡಿಸಿಎಂಗಳೇ ಇಂತಹ ಪ್ರಮುಖ ಜವಾಬ್ದಾರಿಗಳನ್ನು ಮಾಡಿ ಬಿಟ್ಟರೆ ಸಿಎಂ ಕೆಲಸ ಏನು ಅನ್ನೋ ಪ್ರಶ್ನೆ ಎದುರಾಗಿದೆ.
ಪ್ರತಿಯೊಂದರಲ್ಲೂ ಹೀಗೆ ಕಿರಿಕಿರಿ ಮಾಡುತ್ತಿದ್ದರೆ ಯಡಿಯೂರಪ್ಪರಲ್ಲಿ ಆಡಳಿತ ನಡೆಸೋ ಆಸಕ್ತಿಯೇ ಇರಲ್ಲ. ಯಾವುದೇ ಪ್ರಮುಖ ಕೆಲಸ ಇಲ್ಲದಿದ್ದರೆ ಎಷ್ಟು ದಿನ ಯಡಿಯೂರಪ್ಪ ಸಿಎಂ ಆಗಿರ್ತಾರೆ ತಮಗೆ ಬೇಸರವಾಗಿ ಸಿಎಂ ಸ್ಥಾನವನ್ನು ಒಂದು ದಿನ ಯಡಿಯೂರಪ್ಪ ಬಿಟ್ಟು ಕೊಡಲೂ ಬಹುದು. ಆಗ ಸಿಎಂ ಸ್ಥಾನಕ್ಕೆ ತಮ್ಮ ಮಾತು ಕೇಳುವ ಒಬ್ಬರನ್ನು ಕೂರಿಸೋದು ಸಂತೋಷ್ ಪ್ಲಾನಿನ ರಹಸ್ಯವಾಗಿದೆ.