ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಯಡಿಯೂರಪ್ಪ ಆಸೆ ನಿರಾಸೆಯಾಗುತ್ತಿದ್ದು, ಮೋದಿ-ಅಮಿತ್ ಶಾ ತಂತ್ರಕ್ಕೆ ಬಿಎಸ್‍ವೈ ಕುರ್ಚಿ ಕಳೆದುಕೊಳ್ತಾರಾ ಅನ್ನೋ ಪ್ರಶ್ನೆಯೊಂದು ಇದೀಗ ಬಿಜೆಪಿ ನಾಯಕರನ್ನು ಕಾಡುತ್ತಿದೆ.
ಹೌದು. ದೋಸ್ತಿ ಸರ್ಕಾರ ಬೀಳಿಸುವ ಸಾಹಸಕ್ಕಿಳಿದ ಬಿಎಸ್‍ವೈ ಅವರ ಸಿಎಂ ಕುರ್ಚಿಯ ಕನಸು ಕನಸಾಗಿಯೇ ಉಳಿಯುತ್ತಾ ಎಂಬ ಅನುಮಾನವೊಂದು ಎದ್ದಿದೆ. ಯಾಕಂದರೆ ಆಪರೇಷನ್ ಕಮಲ ಮತ್ತೆ ಕೈಗೂಡುವುದು ಸದ್ಯಕ್ಕಂತೂ ಅನುಮಾನವಾಗಿದೆ. ಈ ಹೊತ್ತಲ್ಲೇ ಯಡಿಯೂರಪ್ಪಗೆ ಹೈಕಮಾಂಡ್ ನಿಂದ ಶಾಕ್‍ಂಗ್ ಸುದ್ದಿ ಸಿಕ್ಕಿದೆಯಂತೆ.
ಏನದು ಶಾಕಿಂಗ್ ನ್ಯೂಸ್?
ಶೀಘ್ರವೇ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರು ಬದಲಾವಣೆಯಾಗುವ ಸಾಧ್ಯತೆಗಳಿವೆ. ಸಂಸತ್ ಅಧಿವೇಶನ ಬಳಿಕ ಯಡಿಯೂರಪ್ಪ ಜಾಗದಲ್ಲಿ ಹೊಸಬರ ನೇಮಕವಾಗಲಿದ್ದು, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ರಾಜ್ಯಾಧ್ಯಕ್ಷ ಸ್ಥಾನ ಕೈ ತಪ್ಪಿದರೆ ಬಿಎಸ್‍ವೈ ಪಾಲಿಗೆ ವಿರೋಧ ಪಕ್ಷ ನಾಯಕ ಸ್ಥಾನವಷ್ಟೇ ಉಳಿಯುತ್ತದೆ. ಆಪರೇಷನ್ ಕಮಲ ವರ್ಕೌಟ್ ಆಗಬೇಕಾದರೆ ಕಾಂಗ್ರೆಸ್-ಜೆಡಿಎಸ್‍ನ 15 ಶಾಸಕರು ರಾಜೀನಾಮೆ ಕೊಡಲೇ ಬೇಕು. ಆಗ ವಿಧಾನಸಭೆ ಬಲಾಬಲ 209ಕ್ಕೆ ಕುಸಿಯುತ್ತೆ, ಸಹಜವಾಗಿಯೇ ಬಿಜೆಪಿ ಅಧಿಕಾರ ಹಿಡಿಯಬಹುದು. ಆದರೆ ಆ 15 ಶಾಸಕರು ಬಿಜೆಪಿಗೆ ಸಿಗುತ್ತಿಲ್ಲ. ಹೀಗಾಗಿ ಕಷ್ಟವಾಗುತ್ತದೆ ಎಂದು ಆಪರೇಷನ್ ಆಪರೇಟಿಂಗ್ ಸ್ಟಾರ್ಸ್ ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ಮತ್ತೆ ಸಿಎಂ ಆಗಲು ನಡೆಸುತ್ತಿರುವ ಆಪರೇಷನ್ ಕಮಲ ಸದ್ಯಕ್ಕೆ ಫಲಕೊಡುವುದು ಅನುಮಾನವಾಗಿದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ರಾಜಕೀಯ ಭವಿಷ್ಯ ಮಂಕು ಕವಿತಿದೆಯಾ ಎಂಬ ಚರ್ಚೆ ಬಿಜೆಪಿ ವಲಯದಲ್ಲಿ ಆರಂಭವಾಗಿದೆ.