Connect with us

Belgaum

Exclusive: ಬೆಳಗಾವಿ ರಾಜಕಾರಣದಲ್ಲೀಗ ವಿಷಕನ್ಯೆ ರಾಜಕೀಯ..!

Published

on

– ಬೈಎಲೆಕ್ಷನ್ ಹೊತ್ತಲ್ಲೇ ಸದ್ದಾಗ್ತಿದೆ ರಕ್ತ ಕಣ್ಣೀರು-2

ಬೆಂಗಳೂರು/ಬೆಳಗಾವಿ: ಸಹೋದರರ ಸವಾಲಿಗೆ ಸಾಕ್ಷಿ ಆಗಿರುವ ರಾಜಕೀಯ ಅಖಾಡ ಬೆಳಗಾವಿ. ಸಹೋದರರ ನಡುವಿನ ಸವಾಲು ಪ್ರತಿ ಸವಾಲಿನ ಮಧ್ಯೆ ಗೋಕಾಕ್ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. ಅದು ಅಂತಿಂತ ಬಾಂಬ್ ಅಲ್ಲ ಸಹೋದರರ ಸವಾಲನ್ನು ಮೀರಿದ ವಿಷ ಕನ್ಯೆಯ ಕಥೆ. ಶೀಘ್ರವಾಗಿ ಬೆಳ್ಳಿ ಪರದೆ ಮೇಲೆ ವಿಷ ಕನ್ಯೆಯ ರಕ್ತ ಕಣ್ಣೀರಿನ ಕಥೆ ಬರಲಿದೆ.

ಹೌದು. ರಾಜ್ಯ ರಾಜಕಾರಣದಲ್ಲಿರುವ ವಿಷ ಕನ್ಯೆಯೊಬ್ಬರ ಕುರಿತು ಲಖನ್ ಜಾರಕಿಹೊಳಿ ಚಲನಚಿತ್ರ ನಿರ್ಮಾಣ ಮಾಡಲಿದ್ದಾರೆ. ಬೆಳಗಾವಿ ಜಿಲ್ಲಾ ರಾಜಕಾರಣದ ವಸ್ತು ವಿಷಯ ಇಟ್ಟುಕೊಂಡು ಈ ಚಿತ್ರ ನಿರ್ಮಾಣ ಮಾಡುತ್ತಾರೆ. ಆ ವಿಷ ಕನ್ಯೆಯೊಬ್ಬರ ಕುರಿತ ಚಲನ ಚಿತ್ರಕ್ಕೆ ರಕ್ತ ಕಣ್ಣೀರು ಪಾರ್ಟ್-2 ಎಂದು ನಾಮಕರಣ ಮಾಡಲಿದ್ದಾರೆ.

ವಿಷ ಕನ್ಯೆಯ ವಿಷ ವರ್ತುಲದಲ್ಲಿ ಸಿಲುಕಿದ ಭಗ್ನ ಪ್ರೇಮಿ ರಾಜಕಾರಣಿಯೊಬ್ಬರ ರಾಜಕೀಯ ಜೀವನದ ಬಗ್ಗೆ ಕಥೆಗೆ ಸ್ಕ್ರಿಪ್ಟ್ ಸಿದ್ಧವಾಗುತ್ತಿದೆಯಂತೆ. ಉಪೇಂದ್ರರ ರಕ್ತ ಕಣ್ಣೀರು ಮಾದರಿಯಲ್ಲೇ ರಕ್ತ ಕಣ್ಣೀರು ಪಾರ್ಟ್ -2 ಚಿತ್ರ ನಿರ್ಮಾಣ ಮಾಡುತ್ತೇನೆ ಅಂತ ಪಬ್ಲಿಕ್ ಟಿವಿಗೆ ಸ್ವತಃ ಲಖನ್ ಜಾರಕಿಹೊಳಿ ಹೇಳಿದ್ದಾರೆ.

ಗೋಕಾಕ್ ಉಪ ಚುನಾವಣಾ ಅಖಾಡದಲ್ಲಿ ಪರಸ್ಪರ ತೊಡೆ ತಟ್ಟಿರುವ ಜಾರಕಿಹೊಳಿ ಸಹೋದರರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದಾರೆ. ಇದರ ನಡುವೆ ರಮೇಶ್ ಜಾರಕಿ ಹೊಳಿ ಸಹೋದರ ಲಖನ್ ಜಾರಕಿಹೊಳಿ ಇಂಥದೊಂದು ಬಾಂಬ್ ಸಿಡಿಸಿದ್ದಾರೆ. ರಾಜಕೀಯ ಭಗ್ನ ಪ್ರೇಮಿ ಹಾಗೂ ವಿಷ ಕನ್ಯೆ ಇಬ್ಬರ ಕುರಿತ ಕಥಾ ಹಂದರವಿರುವ ರಕ್ತ ಕಣ್ಣೀರು ಪಾರ್ಟ್-2 ನಿರ್ಮಾಣ ಮಾಡುತ್ತೇನೆ ಚುನಾವಣೆ ಮುಗಿಯಲಿ ಎಂದಿದ್ದಾರೆ.

ಚಿತ್ರಕ್ಕೆ ರಮೇಶ್ ಶುಭಹಾರೈಕೆ!
ರಾಜಕೀಯ ಅಗ್ನಿ ಪರೀಕ್ಷೆಗೆ ಇಳಿದಿರುವ ಲಖನ್ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವ ಬಗ್ಗೆ ಎದುರಾಳಿ ರಮೇಶ್ ಜಾರಕಿಹೊಳಿ ಶುಭ ಹಾರೈಸಿದ್ದಾರೆ. ರಕ್ತ ಕಣ್ಣೀರು ಚಿತ್ರ ಮಾಡುವುದಾದರೆ ಮಾಡಲಿ. ವಿಷ ಕನ್ಯೆ ಯಾರೋ ಗೊತ್ತಿಲ್ಲ. ವಿಷ ಕನ್ಯೆಯರು ಇದ್ದರೆ ಮೈಸೂರು ಅಥವಾ ಮಂಗಳೂರಿನ ಕಡೆ ಇರಬೇಕು ಅಂತ ಲಖನ್‍ಗೆ ರಮೇಶ್ ಟಾಂಗ್ ಕೊಟ್ಟಿದ್ದಾರೆ.

ಹೀಗೆ ರಾಜಕೀಯ ಅಖಾಡದಲ್ಲಿ ಅಗ್ನಿ ಪರೀಕ್ಷೆ ಎದುರಿಸುತ್ತಿರುವ ಲಖನ್ ಜಾರಕಿಹೊಳಿ ರಕ್ತ ಕಣ್ಣೀರು ಪಾರ್ಟ್-2 ಚಿತ್ರ ನಿರ್ಮಾಣ ಮಾಡುವ ಮಾತನಾಡಿದ್ದಾರೆ. ರಾಜಕಾರಣದ ವಿಷ ಕನ್ಯೆ ಒಬ್ಬರ ಕುರಿತ ಆ ಚಿತ್ರ ನಿರ್ಮಾಣಕ್ಕೇನೋ ನಿರ್ಧರಿಸಿದ್ದಾರೆ. ಆದರೆ ಆ ವಿಷ ಕನ್ಯೆ ಯಾರು ಅಂತ ಗೊತ್ತಾಗಬೇಕಾದರೆ ರಕ್ತ ಕಣ್ಣೀರು ಪಾರ್ಟ್2 ಬಿಡುಗಡೆವರೆಗೆ ಕಾಯಲೇಬೇಕು.

Click to comment

Leave a Reply

Your email address will not be published. Required fields are marked *