ಬೆಂಗಳೂರು: ತಡ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ವ್ಯಕ್ತಿಯ ಮೇಲೆ ಬಿಯರ್ ಬಾಟಲ್ ನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದ ಬಾಟಲ್ ಶೂರರನ್ನ ವಿವೇಕ ನಗರ ಪೊಲೀಸರು ಬಂಧಿಸಿದ್ದಾರೆ.
ಕಮಲ್, ಚಂದ್ರಬಾಬು ಮತ್ತು ಒಬ್ಬ ಬಾಲಪರಾಧಿ ಸೇರಿ ಮೂವರನ್ನು ಬಂಧಿಸಲಾಗಿದೆ. ಬಂಧಿತರಿಂದ ಒಂದು ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಬ್ಲಾಕ್ ಪಲ್ಸರ್ ಬೈಕ್ ವಶ ಪಡಿಸಿಕೊಳ್ಳಲಾಗಿದೆ. ಮಾರ್ಚ್ 5 ರಂದು ವಿವೇಕ್ ನಗರ ಮುಖ್ಯ ರಸ್ತೆಯಲ್ಲಿ ಹೋಟೆಲ್ ಕೆಲಸ ಮುಗಿಸಿಕೊಂಡು ತಡರಾತ್ರಿ ಮನೆಗೆ ಹೋಗುತ್ತಿದ್ದ ಸುಶಾಂತ್ ಮೇಲೆ ಆರೋಪಿಗಳು ಕಂಠಪೂರ್ತಿ ಕುಡಿದು ಬಂದು ಏಕಾಏಕಿ ಅಟ್ಯಾಕ್ ಮಾಡಿದ್ದಾರೆ.
ಸುಶಾಂತ್ ಮೇಲೆ ಹಲ್ಲೆ ಮಾಡಿ ಕೈಯಲ್ಲಿದ್ದ ಬಿಯರ್ ಬಾಟಲ್ ನಿಂದ ತಲೆಗೆ ಹೊಡೆದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಸುಶಾಂತ್ ಹೋಗುತ್ತಿದ್ದ ಸೈಕಲ್‍ನಿಂದ ಆತನ ಮೇಲೆಯೇ ಹಲ್ಲೆ ಮಾಡಿ ಅವನ ಬಳಿ ಇದ್ದ ಮೊಬೈಲ್ ಫೋನ್ ಹಾಗೂ ನಗದನ್ನು ದೋಚಿಕೊಂಡು ಹೋಗಿರುತ್ತಾರೆ. ಘಟನೆ ಸಂಬಂಧ ಸುಶಾಂತ್ ವಿವೇಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಹಲ್ಲೆ ಮಾಡಿದ್ದ ಸ್ಥಳದಲ್ಲಿಯ ಸಿಸಿಟಿವಿ ವಿಡಿಯೋ ಪಡೆದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ತಡರಾತ್ರಿಯ ತನಕ ಕುಡಿದು ನಂತರ ಫೀಲ್ಡಿಗೆ ಇಳಿಯುತ್ತಿದ್ದರು. ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ಹೋಗುವರ ಮೇಲೆ ಹಲ್ಲೆ ಮಾಡಿ ಮೊಬೈಲ್ ಹಾಗೂ ಬೆಲೆ ಬಾಳುವ ವಸ್ತುಗಳನ್ನು ದೋಚಿಕೊಂಡು ಹೋಗುತ್ತಿದ್ದರು. ಸಿಕ್ಕ ಹಣದಲ್ಲಿ ಕುಡಿದು ತಿಂದು ಮೋಜು ಮಸ್ತಿ ಮಾಡುತ್ತಿದ್ದರು.