ಬೆಂಗಳೂರು: ಸಾರ್ವಜನಿಕ ಸ್ಥಳ ಮತ್ತು ಶಾಲಾ ಕಾಲೇಜುಗಳ 100 ಮೀಟರ್ ಅಂತರದಲ್ಲಿ ತಂಬಾಕು ಮಾರುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ. ಬಿಬಿಎಂಪಿ ಪಶ್ಚಿಮ ವಲಯದ ಆರೋಗ್ಯ ಅಧಿಕಾರಿ ಬಾಲಸುಂದರ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.
ಮಲ್ಲೇಶ್ವರಂ ಸುತ್ತಮುತ್ತ ಶಾಲಾ ಕಾಲೇಜುಗಳು ಇರುವ 100 ಮೀಟರ್ ಅಂತರದಲ್ಲಿ ತಂಬಾಕು ಮಾರಾಟ ಮಾಡಲಾಗುತ್ತಿತ್ತು. ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ದೂರಿನ ಮೇರೆಗೆ ಬಿಬಿಎಂಪಿ ಆರೋಗ್ಯಾಧಿಕಾರಿಗಳ ಇಂದು ದಾಳಿ ನಡೆಸಿದ್ದಾರೆ. ತಂಬಾಕು ನಿಯಂತ್ರಣ ಕಾಯ್ದೆ ಅನ್ವಯ ದಾಳಿ ನಡೆಸಿ ಎಚ್ಚರಿಕೆ ನೀಡಲಾಗಿದೆ.
Advertisement
Advertisement
ಸದರಿ ಕಾರ್ಯಾಚರಣೆಯನ್ನು ಮಲ್ಲೇಶ್ವರಂನ ಸಂಪಿಗೆ ರಸ್ತೆ, 11ನೇ ಅಡ್ಡ ರಸ್ತೆ, 15ನೇ ಅಡ್ಡ ರಸ್ತೆ ಹಾಗೂ ರೈಲ್ವೆ ಪ್ಯಾರಲಲ್ ರಸ್ತೆಯಲ್ಲಿ ಮಾಡಲಾಗಿದೆ. ಶಾಲಾ-ಕಾಲೇಜುಗಳ ಬಳಿಯೇ ತಂಬಾಕು ಮಾರುತ್ತಿದ್ದ 7 ಮಳಿಗೆಗಳ ಮೇಲೆ ಪೊಲೀಸ್ ಸಿಬ್ಬಂದಿ ಸಹಕಾರದೊಂದಿಗೆ ದಾಳಿ ನಡೆಸಿದ್ದಾರೆ. ಜೊತೆಗೆ ಒಟ್ಟು 7 ಸಾವಿರ ರೂ. ದಂಡ ವಿಧಿಸಲಾಗಿದ್ದು, ಮತ್ತೊಮ್ಮೆ ಮಾರಾಟ ಮಾಡಿದರೆ ಅಂಗಡಿಯನ್ನು ಮುಚ್ಚಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
Advertisement
ಬೆಂಗಳೂರಿನಲ್ಲಿ ಮೂಲೆ ಮೂಲೆಯಲ್ಲೂ ಶಾಲಾ-ಕಾಲೇಜು ವ್ಯಾಪ್ತಿಯ 100 ಮೀಟರ್ ಅಂತರದಲ್ಲಿ ತಂಬಾಕು ಮಾರಾಟ ಮಾಡುತ್ತಿರುವುದು ಹೆಚ್ಚಾಗಿದೆ. ಬಿಬಿಎಂಪಿ ಅವರು ಇದನ್ನು ಕಂಡು ಸುಮ್ಮನೆ ಇರುತ್ತಿದ್ದು, ಸಾರ್ವಜನಿಕ ಕೆಂಗಣ್ಣಿಗೆ ಗುರಿಯಾಗಿತ್ತು.