ಬೆಂಗಳೂರು: ಬಿಬಿಎಂಪಿ ಶಾಲೆಗಳಿಗೆ ಕೆಂಪೇಗೌಡರ ಹೆಸರು ಇಡಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ನಾರಾಯಣ್ ಸ್ವಾಮಿ ಹೇಳಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಶಿಕ್ಷಣ ಸ್ಥಾಯಿ ಸಮಿತಿ ಹಾಗೂ ನಗರ ಜಿಲ್ಲಾ ಪಂಚಾಯತ್ ಶಿಕ್ಷಣ ಅಧ್ಯಕ್ಷ ನರಸಿಂಹಮೂರ್ತಿ ಗುರುವಾರ ನಡೆಸಿದ ಜಂಟಿ ಸುದ್ದಿಗೋಷ್ಟಿಯಲ್ಲಿ ಈ ಮಾಹಿತಿ ತಿಳಿಸಿದರು. ಈ ಬಗ್ಗೆ ಮಾತನಾಡಿದ ನರಸಿಂಹಮೂರ್ತಿ ಅವರು, ಬೆಂಗಳೂರಿನಲ್ಲಿರುವ ಸರ್ಕಾರಿ ಶಾಲೆ, ಪಾಲಿಕೆ ಶಾಲೆಗಳಿಗೆ ಸಂಬಂಧಿಸಿದ ಅಭಿವೃದ್ಧಿ ಮಾಡಲು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಹಣಕಾಸಿನ ವ್ಯವಸ್ಥೆ ಇಲ್ಲ. ಇದಕ್ಕೆ ಪಾಲಿಕೆ ಶಿಕ್ಷಣ ಸಮಿತಿಯಲ್ಲಿ ಮನವಿ ಮಾಡಿದ್ದೆವು. ಇದಕ್ಕೆ ಸ್ಪಂದಿಸಿದ ಪಾಲಿಕೆ ಶಿಕ್ಷಣ ಸಮಿತಿ ಈ ಬಜೆಟ್‍ನಲ್ಲಿ ಮೂಲಭೂತ ಸೌಕರ್ಯ ಕೊಡುವ ಭರವಸೆ ನೀಡಿದೆ ಎಂದರು.
Advertisement
Advertisement
ಜೊತೆಗೆ ಪಾಲಿಕೆ ವ್ಯಾಪ್ತಿಯಲ್ಲಿ 529 ಸರ್ಕಾರಿ ಶಾಲೆಗಳಿವೆ. ನೀರು ಮತ್ತು ವಿದ್ಯುತ್ ಉಚಿತ ಹಾಗೂ ಮೂಲಸೌಕರ್ಯವೂ ಬಿಬಿಎಂಪಿ ಒದಗಿಸಲಿದೆ. 30 ಕೋಟಿ ರೂ. ವೆಚ್ಚದಲ್ಲಿ ಈ ಬಗ್ಗೆ ಬಜೆಟ್‍ನಲ್ಲಿ ಪ್ರಸ್ತಾವನೆ ಇಡಲಾಗಿದೆ. 529 ಸರ್ಕಾರಿ ಶಾಲೆಗಳ ನಿರ್ವಹಣೆಗೆ ಬಿಬಿಎಂಪಿ ಹಾಗೂ ಜಿಲ್ಲಾ ಪಂಚಾಯತ್‍ಗೆ ಕೇವಲ 75 ಲಕ್ಷ ರೂ. ಅನುದಾನ ಇದೆ. 1,300 ಕ್ಕೂ ಹೆಚ್ಚು ಶಾಲೆಗಳಿವೆ. ಬರೀ ಸಂಬಳ ಕೊಡೋಕೆ ಹಣ ಸಾಕಾಗ್ತಿದೆ. ನಮಗೆ ಸಣ್ಣ ವಾಹನದ ವ್ಯವಸ್ಥೆಯೂ ಇಲ್ಲ. ಇಲಾಖೆ ಖರ್ಚು ವೆಚ್ಚಕ್ಕೆ 75 ಲಕ್ಷ ಸಾಲುತ್ತಿಲ್ಲ ಎಂದು ಮಂಜುಳಾ ನಾರಾಯಣಸ್ವಾಮಿ ಹೇಳಿದರು.
Advertisement
Advertisement
ಕೆಂಪೇಗೌಡರು ಕಟ್ಟಿರುವ ನಾಡು ಇದು. ಹೀಗಾಗಿ ಪಾಲಿಕೆ ಶಾಲೆಗಳಿಗೂ ಕೆಂಪೇಗೌಡ ಹೆಸರಿಡಲು ತೀರ್ಮಾನ ಮಾಡಲಾಗಿದೆ. ಈ ಬಗ್ಗೆ ಕೌನ್ಸಿಲ್‍ನಲ್ಲಿ ಪ್ರಸ್ತಾವನೆ ಇಡಲಾಗುವುದು ಎಂದರು. ಪಾಲಿಕೆ ಶಾಲೆಗಳ ಗುಣಮಟ್ಟವನ್ನೂ ಹೆಚ್ಚಳ ಮಾಡ್ತೇವೆ. ಮೂಲಭೂತ ಸೌಕರ್ಯಗಳಾದ ನೀರು, ಶೌಚಾಲಯ, ವಿದ್ಯುತ್ ನೀಡದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.