Connect with us

ಮೋದಿ ದೇಶದ ಪ್ರಧಾನಿ, ಬಂದ್ ನಡೆಸಲು ಅವಕಾಶ ನೀಡಲ್ಲ: ರಾಮಲಿಂಗಾ ರೆಡ್ಡಿ

ಮೋದಿ ದೇಶದ ಪ್ರಧಾನಿ, ಬಂದ್ ನಡೆಸಲು ಅವಕಾಶ ನೀಡಲ್ಲ: ರಾಮಲಿಂಗಾ ರೆಡ್ಡಿ

ಬೆಂಗಳೂರು: ಭಾನುವಾರ ನಗರದಲ್ಲಿ ಎಲ್ಲೂ ಪ್ರತಿಭಟನೆಗೆ ಅವಕಾಶವಿಲ್ಲ. ಬಂದ್ ಮಾಡುವವರು ಫ್ರೀಡಂ ಪಾರ್ಕ್‍ನಲ್ಲಿ ಮಾತ್ರ ಪ್ರತಿಭಟನೆ ಮಾಡಲಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿಯ ಪ್ರಧಾನಿ ಅಲ್ಲ. ಅವರು ದೇಶದ ಪ್ರಧಾನಿ. ಪ್ರಧಾನಿಗಳು ಬಂದಾಗ ಗೌರವ ಕೊಡುವುದು ರಾಜ್ಯ ಸರ್ಕಾರದ ಕರ್ತವ್ಯ. ಹೀಗಾಗಿ ಪ್ರತಿಭಟನೆ ಮಾಡುವವರಿಗೆ ಫ್ರೀಡಂ ಪಾರ್ಕ್ ಪ್ರತಿಭಟಿಸಲು ಅವಕಾಶ ನೀಡಲಾಗುವುದು ಎಂದು ಹೇಳಿದರು.

ಭಾನುವಾರ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುವುದು ಎಂದು ರಾಮಲಿಂಗಾ ರೆಡ್ಡಿ ತಿಳಿಸಿದರು.

ಮಹದಾಯಿ ವಿಚಾರದಲ್ಲಿ ಪ್ರಧಾನಿ ಮೋದಿಯವರು ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆ ಹರಿಸಿಕೊಡಬೇಕು. ಮಹದಾಯಿ ಸಮಸ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ ಬಗೆ ಹರಿಸುವ ಭರವಸೆಯನ್ನು ನೀಡದೇ ಇದ್ದರೆ ಫೆ.4 ರಂದು ಬೆಂಗಳೂರು ಬಂದ್ ನಡೆಸಲಾಗುವುದು ಎಂದು ವಾಟಾಳ್ ನಾಗರಾಜ್ ಹೇಳಿದ್ದರು.

ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಫೆ. 4ರಂದು ಪ್ರಧಾನಿ ಮೋದಿ ಬೆಂಗಳೂರಿಗೆ ಬರುತ್ತಿದ್ದಾರೆ. ಹೀಗಾಗಿ 3ನೇ ತಾರೀಖಿನ ಒಳಗಡೆ ಮಹದಾಯಿ ನೀರಿನ ಸಮಸ್ಯೆಯನ್ನು ನಾನು ಬಗೆಹರಿಸುತ್ತೇನೆ ಎಂದು ಪ್ರಧಾನಿಯಿಂದ ಭರವಸೆ ಕೊಡಿಸಿ. ಇಲ್ಲದೇ ಇದ್ದರೆ 4ರಂದು ಬೆಂಗಳೂರು ಬಂದ್ ಮಾಡಬೇಕಾಗುತ್ತದೆ. ನಮಗೆ ಸ್ಪಷ್ಟವಾದ ಭರವಸೆ ಕೊಡಿಸಬೇಕು. ಶನಿವಾರ ಮಧ್ಯಾಹ್ನದ ತನಕ ಕಾಯುತ್ತೇವೆ. ಮಧ್ಯಾಹ್ನದ ಒಳಗಡೆ ಭರವಸೆ ಸಿಗದೇ ಹೋದರೆ ಬಂದ್ ಗೆ ಕರೆ ನೀಡಬೇಕಾಗುತ್ತದೆ ಎಂದು ವಾಟಾಳ್ ನಾಗರಾಜ್ ಬಿಜೆಪಿಗೆ ಡೆಡ್‍ಲೈನ್ ನೀಡಿದ್ದರು.