ಆನೇಕಲ್: ಹಣಕಾಸಿನ ವಿಚಾರಕ್ಕೆ ವ್ಯಕ್ತಿಯ ಮೇಲೆ ಪೆಟ್ರೋಲ್ ಸುರಿದು ಕೊಲೆ ಮಾಡಿ ಪೈಶಾಚಿಕ ಕೃತ್ಯವೆಸಗಿ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರೆ.
ಕಳೆದ ಮೂರನೇ ತಾರೀಖಿನಂದು ಬೆಂಗಳೂರು ಹೊರವಲಯ ಹೆನ್ನಾಗರ ಬಳಿಯ ರೇಣುಕಾ ಯಲ್ಲಮ್ಮ ದೇವಾಲಯದ ಮುಂಭಾಗ ಹೊಸಹಳ್ಳಿ ನಿವಾಸಿ ಜ್ಯೋತಪ್ಪ (51) ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡ ಮಾರಕಸ್ತ್ರಗಳಿಂದ ಹಲ್ಲೆ ನಡೆಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು ಬಳಿಕ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.
ಬಳಿಕ ಕೊಲೆ ಪ್ರಕರಣ ದಾಖಲು ಮಾಡಿಕೊಂಡ ಸೂರ್ಯನಗರ ಪೊಲೀಸರು, ದಾಳಿಗೆ ಒಳಗಾಗಿದ್ದ ವ್ಯಕ್ತಿ ಸಾವಿಗೂ ಮುನ್ನ ಅನುಮಾನ ವ್ಯಕ್ತಪಡಿಸಿದ್ದ ರಜಿಯಾಬೇಗಂ ಎಂಬ ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಜ್ಯೋತಪ್ಪ ಹಣದ ವ್ಯವಹಾರ ನಡೆಸುತ್ತಿದ್ದು, ರಜಿಯಾಬೇಗಂಗೆ ಸಾಲವಾಗಿ 20,000 ಹಣವನ್ನು ನೀಡಿದ್ದ ಬಳಿಕ ಹಣವನ್ನು ಹಿಂತಿರುಗಿಸುವಂತೆ ಕೇಳಿದ್ದ. ಆದರೆ ರಜಿಯಾಬೇಗಂಗೆ ಹಣವನ್ನು ಹಿಂದಿರುಗಿಸಲು ಸಾಧ್ಯವಾಗಿರಲಿಲ್ಲ. ಆಗ ದೈಹಿಕ ಸಂಪರ್ಕ ಬೆಳೆಸುವಂತೆ ಜ್ಯೋತಪ್ಪ ಹಿಂಸಿಸುತ್ತಿದ್ದ. ಆದ್ದರಿಂದ ಈ ಬಗ್ಗೆ ಪರಿಚಯಸ್ತರಾದ ಲಿಂಗರಾಜು ಬಳಿ ಆಕೆ ಹೇಳಿಕೊಂಡಿದ್ದಳು. ಆಗ ಲಿಂಗರಾಜು ಹಾಗೂ ಆತನ ಸ್ನೇಹಿತರಾದ ಸತೀಶ್ ಮತ್ತು ಶಶಿಕುಮಾರ್ ಸೇರಿ ಕೃತ್ಯವನ್ನು ಎಸೆಗಿದ್ದಾರೆಂದು ಪೊಲೀಸ್ ತನಿಖೆ ವೇಳೆ ಮಹಿಳೆ ಬಾಯ್ಬಿಟ್ಟಿದ್ದಾಳೆ.
ಬಳಿಕ ಆರೋಪಿಗಳಾದ ರಜಿಯಾಬೇಗಂ, ಲಿಂಗರಾಜು, ಸತೀಶ್ ಮತ್ತು ಶಶಿಕುಮಾರ್ ಅನ್ನು ಪೊಲೀಸರು ಬಂಧಿಸಿ ವಿಚಾರಣೆ ಮಾಡಿದಾಗ ತಪ್ಪೊಪ್ಪಿಕೊಂಡಿದ್ದು, ಆರೋಪಿಗಳನ್ನು ಸ್ಥಳ ಮಹಾಜರ್ ಮಾಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಜೈಲಿಗಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.