Connect with us

Bengaluru Rural

ತಾಯಿ ಸಮಾಧಿಯಾದ ಮೇಲೆ ಮಗು ಹೇಳಿತು ಸತ್ಯ – ಪೊಲೀಸರಿಂದ ಕೊಲೆ ಆರೋಪಿ ಅರೆಸ್ಟ್

Published

on

ಬೆಂಗಳೂರು: ಸಹಜ ಸಾವು ಎಂದು ತಿಳಿದು ಮಹಿಳೆಯ ಅಂತ್ಯಸಂಸ್ಕಾರ ಮಾಡಲಾಗಿದ್ದ ಪ್ರಕರಣಕ್ಕೆ ಆಕೆಯ ಮಗು ಹೇಳಿದ ಭಯಾನಕ ಸತ್ಯದಿಂದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವೆಂಕಟೇಶ್ (28) ಎಂಬಾತ 30 ವರ್ಷದ ಗೃಹಿಣಿ ಸುಮಲತಾಳನ್ನು ಆಕೆಯ ಮಗುವಿನ ಮುಂದೆಯೇ ಕೊಲೆ ಮಾಡಿದ್ದಾನೆ. ನಂತರ ಯಾರಿಗೂ ಹೇಳಬೇಡ ಎಂದು ಮಗುವಿಗೆ ಹೇಳಿ ಪರಾರಿಯಾಗಿದ್ದ. ಆದರೆ ಅಪ್ಪನ ಜೊತೆ ಮಗು ಹೇಳಿದ ಒಂದು ಸತ್ಯದಿಂದ ಆರೋಪಿ ವೆಂಕಟೇಶ್ ಪೊಲೀಸರ ಅತಿಥಿಯಾಗಿದ್ದಾನೆ.

ಸುಮಲತಾ ಆರು ವರ್ಷದ ಹಿಂದೆ ಆನೇಕಲ್ ತಾಲೂಕಿನ ಚಿನ್ನಯ್ಯನ ಪಾಳ್ಯದ ದೇವರಾಜು ಎಂಬುವನೊಂದಿಗೆ ಮದುವೆಯಾಗಿ ಸಂಸಾರ ಮಾಡುತ್ತಿದ್ದಳು. ಈಕೆಗೆ 5 ವರ್ಷ, 3 ವರ್ಷದ ಎರಡು ಗಂಡು ಮಕ್ಕಳಿದ್ದು ಅಕ್ಟೋಬರ್ 16 ರಂದು ಬೆಳಿಗ್ಗೆ ಪತಿ ದೇವರಾಜುಗೆ ಕರೆ ಮಾಡಿ ಎದೆ ನೋವು ಅಂದಿದ್ದಾಳೆ. ಜೊತೆಗೆ ಆಸ್ಪತ್ರೆಗೆ ಹೋಗುವುದಾಗಿ ತಿಳಿಸಿದ್ದಾಳೆ. ಮತ್ತೆ ರಾತ್ರಿ ಗಂಡನೊಂದಿಗೆ ಫೋನ್‍ನಲ್ಲಿ ಮಾತನಾಡಿ ಮಲಗಿದ್ದು ಬೆಳಗ್ಗೆ ಅಕ್ಕಪಕ್ಕದ ಮನೆಯವರು ಮಕ್ಕಳು ಅಳುತ್ತಿರುವುದನ್ನು ಕಂಡು ಒಂದು ನೋಡಿದಾಗ ಸುಮಲತಾ ಮೃತಪಟ್ಟಿದ್ದಳು.

ಇತ್ತ ಪತಿ ದೇವರಾಜುಗೆ ಗ್ರಾಮಸ್ಥರು ವಿಷಯ ತಿಳಿಸಿದ್ದು, ದೇವರಾಜು ನಿನ್ನೆ ಎದೆನೋವು ಅಂದಿದ್ದಳು ಎಂದಿದ್ದಾನೆ. ಗ್ರಾಮಸ್ಥರು ಹೃದಯಾಘಾತದಿಂದ ಸಾವನಪ್ಪಿದ್ದಾಳೆ ಎಂದು ತಿಳಿದು ಗ್ರಾಮಸ್ಥರೆಲ್ಲ ಸೇರಿ ಅಂತ್ಯಸಂಸ್ಕಾರ ನಡೆಸಿದ್ದಾರೆ. ಅಂತ್ಯಸಂಸ್ಕಾರ ನಡೆದ ರಾತ್ರಿ ಮಗುವನ್ನು ಸೀರೆ ಜೋಲಿಗೆ ಮಲಗಿಸಲು ಮುಂದಾದಾಗ ಜೋಲಿ ನೋಡಿ ಮಗು ಮಾಮ ಅಮ್ಮನಿಗೆ ಹೊಡೆದಿದ್ದಾರೆ ಎಂದು ಹೇಳಿದೆ. ತಕ್ಷಣ ಪತಿ ದೇವರಾಜು ಮತ್ತವರ ತಂದೆ ತಾಯಿ ಪಕ್ಕದ ಮನೆಯಲ್ಲಿ ವಾಸವಿದ್ದ ವೆಂಕಟೇಶ್ (28) ಎಂಬುವವನ ಮೇಲೆ ಆನೇಕಲ್ ಪೊಲೀಸರಿಗೆ ದೂರು ನೀಡಿದ್ದು ಕೊಲೆ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ವೆಂಕಟೇಶನನ್ನು ಬಂಧಿಸಿ ಹೂತಿದ್ದ ಶವ ಹೊರತೆಗೆದು ಮಹಜರ್ ನಡೆಸಿ ಶವ ಪರೀಕ್ಷೆ ನಡೆಸಿದ್ದಾರೆ. ಸುಮಲತಾ ದೇವರಾಜು ಮದುವೆ ಆದ ನಂತರ ಚಿಣ್ಣಯ್ಯನಪಾಳ್ಯದಲ್ಲಿ ವಾಸವಿದ್ದರು. ದೇವರಾಜು ವೃತ್ತಿಯಲ್ಲಿ ಚಾಲಕನಾಗಿದ್ದು, ಕೆಲಸದ ಮೇಲೆ ಹೊರ ಹೋದ್ರೆ ತಿರುಗಿ ಬರುತಿದ್ದದ್ದು ಮೂರ್ನಾಲ್ಕು ದಿನ ಅಥವಾ ವಾರಗಳೇ ಕಳೆಯುತಿತ್ತು. ಈ ವೇಳೆ ದೇವರಾಜನ ದೂರದ ಸಂಬಂಧಿ ಆನೇಕಲ್ ತಾಲೂಕಿನ ಚಿಕ್ಕಹಾಗಡೆ ಗ್ರಾಮದ ವೆಂಕಟೇಶ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾ ದೇವರಾಜು ಮನೆಯ ಪಕ್ಕದಲ್ಲೇ ವಾಸಕ್ಕೆ ಬಂದಿದ್ದ.

ಇತ್ತ ವಾರಗಟ್ಟಲೆ ಮನೆಯಿಂದ ಹೊರಗಿರುತ್ತಿದ್ದ ದೇವರಾಜು ವೆಂಕಟೇಶನನ್ನು ನಂಬಿ ಮನೆ ಕಡೆ ಸ್ವಲ್ಪ ನೋಡುಕೊಳ್ಳುವಂತೆ ತಿಳಿಸಿದ್ದ. ಮೊದಲಿಗೆ ಸಭ್ಯನಂತೆ ಇದ್ದ ವೆಂಕಟೇಶ ಸುಮಲತಾಳನ್ನು ಬಲೆಗೆ ಹಾಕಿಕೊಂಡಿದ್ದ. ಇತ್ತ ಗಂಡ ಹೊರಗೆ ಹೆಚ್ಚು ಇರುತ್ತಿದ್ದರಿಂದ ವೆಂಕಟೇಶನ ಸಹವಾಸ ಸುಮಲತಾಳಿಗೆ ಹಿತವಾಗಿತ್ತು. ಇನ್ನು ಕಾಲ ಕಳೆದಂತೆ ಇವರ ಸಂಬಂಧ ಜಗಜ್ಜಾಹೀರಾಗಿ ರಾಜಿ ಪಂಚಾಯಿತಿ ನಡೆದು ವೆಂಕಟೇಶನನ್ನು ಊರು ಬಿಡಿಸಲಾಗಿತ್ತು. ನಂತರ ಸುಮಲತಾ ಕೂಡ ಹಿರಿಯರ ಮಾತಿಗೆ ಬೆಲೆಕೊಟ್ಟು ಗಂಡನೊಂದಿಗೆ ಅನ್ಯೋನ್ಯವಾಗಿದ್ದಳು.

ವೆಂಕಟೇಶ್ ಮಾತ್ರ ದೇವರಾಜು ಕೆಲಸಕ್ಕೆ ಹೋಗುವುದನ್ನು ನೋಡಿಕೊಂಡು ಮನೆಗೆ ಬಂದು ಸುಮಲತಾಳಿಗೆ ಗಂಡನನ್ನು ಬಿಟ್ಟು ಬರುವಂತೆ ಹಿಂಸಿಸತೊಡಗಿದ. ಹೀಗೆ ಆಕ್ಟೋಬರ್ 16 ರಂದು ರಾತ್ರಿ ಸುಮಲತಾಳ ಮನೆಗೆ ಕಬಾಬ್ ತೆಗೆದುಕೊಂಡು ಬಂದು ತನ್ನೊಂದಿಗೆ ಬರುವಂತೆ ಪೀಡಿಸಿದ್ದ. ಸುಮಲತಾ ಒಪ್ಪದಕ್ಕೆ ಮಗು ಮಲಗಿಸುವ ಸೀರೆಯ ಜೋಳಿಯಿಂದ ಕುತ್ತಿಗೆ ಬಿಗಿದು ಸಾಯಿಸಿ ಮಗುವಿಗೆ ಯಾರಿಗೂ ಹೇಳದಂತೆ ತಿಳಿಸಿ ಹೋಗಿ ತಲೆ ಮರೆಸಿಕೊಂಡಿದ್ದ.

ಕೊಲೆಗಾರ ಎಷ್ಟೇ ಬುದ್ಧಿವಂತನಾಗಿದರೂ ಸಣ್ಣದೊಂದು ಸುಳಿವು ಬಿಟ್ಟಿರುತ್ತಾನೆ ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದ್ದು, ಐದು ವರ್ಷದ ಮಗು ತನ್ನ ತಾಯಿಯ ರಹಸ್ಯ ಬಯಲು ಮಾಡಿ ಕೊಲೆ ಆರೋಪಿಯ ಬಂಧನಕ್ಕೆ ಕಾರಣವಾಗಿದೆ. ಸಹಜ ಸಾವೆಂದು ಸುಮನಿದ್ದವರಿಗೆ ಮಗುವಿನ ಮೂಲಕ ಸತ್ಯ ತಿಳಿದು ಗ್ರಾಮಸ್ಥರಿಗೆ ಶಾಕ್ ಆಗಿದೆ.

Click to comment

Leave a Reply

Your email address will not be published. Required fields are marked *