ಬೆಂಗಳೂರು: ಟೋಲ್‍ಗಳಲ್ಲಿ ವಾಹನ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ್ದು, ವಾಹನ ಸವಾರರಿಂದ ನಿರೀಕ್ಷಿತ ಪ್ರತಿಕ್ರಿಯೆ ದೊರೆಯದ ಕಾರಣ ಮೂರು ಬಾರಿ ಕಾಲಾವಕಾಶ ವಿಸ್ತರಣೆ ಮಾಡಿದೆ. ಇದರ ನಡುವೆ ಫಾಸ್ಟ್ ಟ್ಯಾಗ್ ಕಡ್ಡಾಯದ ಪರ, ವಿರೋಧ ಚರ್ಚೆಗಳು ನಡೆಯುತ್ತಿದೆ.
ದೇಶದ್ಯಾಂತ ಟೋಲ್ ಪ್ಲಾಜಾಗಳಲ್ಲಿ ಸಂಚಾರ ದಟ್ಟಣೆ ಕಾಯುವಿಕೆ ಕೊನೆಗೊಳಿಸಲು ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫಾಸ್ಟ್ ಟ್ಯಾಗ್ ಸ್ಟಿಕ್ಕರ್ ಪರಿಚಯಿಸಿದ್ದು, ವಾಹನ ಸವಾರರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಬಹುತೇಕ ವಾಹನ ಮಾಲೀಕರು ಫಾಸ್ಟ್ ಟ್ಯಾಗ್ ಅಳವಡಿಸಿಕೊಂಡಿಲ್ಲ. ಈ ಹಿನ್ನೆಲೆ ಕೇಂದ್ರ ಸರ್ಕಾರ ಫಾಸ್ಟ್ ಟ್ಯಾಗ್ ಅಳವಡಿಕೆಗೆ ನೀಡಿದ್ದ ಗಡುವನ್ನು ಮತ್ತೆ 30 ದಿನಗಳ ಕಾಲ ವಿಸ್ತರಿಸಿದೆ. ಈ ಹಿನ್ನೆಲೆ ವಾಹನ ಸವಾರರಿಗೆ ಕೊಂಚ ರಿಲೀಫ್ ಸಿಕ್ಕಿದೆ.
ಬೆಂಗಳೂರು ತಮಿಳುನಾಡು ರಾಷ್ಟ್ರೀಯ ಹೆದ್ದಾರಿ 7ರ ಅತ್ತಿಬೆಲೆ ಟೋಲ್ ಬಳಿ ಫಾಸ್ಟ್ ಟ್ಯಾಗ್ ಅಳವಡಿಕೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಾಹನ ಸವಾರರು ಫಾಸ್ಟ್ ಟ್ಯಾಗ್ ಅಳವಡಿಕೆಯಿಂದ ಖುಷಿಯಾಗಿದ್ದಾರೆ. ಆದರೆ ಫಾಸ್ಟ್ ಟ್ಯಾಗ್ ವಿತರಣೆ ವ್ಯವಸ್ಥೆ ಸರಿ ಇಲ್ಲದ ಕಾರಣ ಫಾಸ್ಟ್ ಟ್ಯಾಗ್ ವಿತರಣೆ ಬಗ್ಗೆ ಜಾಗೃತಿ ಮೂಡಿಸಬೇಕು ಹಾಗೂ ಕೆಲ ವಾಹನ ಸವಾರರಿಗೆ ಫಾಸ್ಟ್ ಟ್ಯಾಗ್‍ನ ಅರಿವು ಮೂಡಿಸಬೇಕು ಎಂಬುದು ವಾಹನ ಸವಾರರು ಅಭಿಪ್ರಾಯವಾಗಿದೆ.
ಫಾಸ್ಟ್ ಟ್ಯಾಗ್ ಅಳವಡಿಕೆ ಹಾಗೂ ಸ್ಕ್ಯಾನಿಂಗ್ ನಲ್ಲಿ ಹಲವು ಲೋಪಗಳಿದ್ದು, ಇದರಿಂದಾಗಿ ಫಾಸ್ಟ್ ಟ್ಯಾಗ್ ಅಳವಡಿಸಿದ್ದರು ಟೋಲ್ ಗಳಲ್ಲಿ ಕಾಯುವಿಕೆ ಮುಂದುವರಿದಿದೆ. ಇದಕ್ಕೆ ಫಾಸ್ಟ್ ಟ್ಯಾಗ್ ವಿತರಿಸುತ್ತಿರುವ ಏಜೆನ್ಸಿಗಳು ಗುಣಮಟ್ಟದ ಟ್ಯಾಗ್ ವಿತರಣೆ ಮಾಡದ ಕಾರಣ ಹಾಗೂ ವಾಹನಗಳಲ್ಲಿ ಸರಿಯಾದ ಸ್ಥಳದಲ್ಲಿ ಟ್ಯಾಗ್ ಅಳವಡಿಸಿದ ಕಾರಣ ಟೋಲ್ ಗೇಟ್ ಗಳಲ್ಲಿ ಸ್ಕ್ಯಾನಿಂಗ್ ನಿಧಾನ ಗತಿಯಲ್ಲಿ ಆಗುತ್ತಿದ್ದು, ಇದನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಇನ್ನೊಂದು ವಾರದಲ್ಲಿ ಎಲ್ಲವೂ ಸರಿಯಾಗಲಿದೆ ಎಂಬುದು ಅತ್ತಿಬೆಲೆ ಟೋಲ್ ಮ್ಯಾನೇಜರ್ ತಿಮ್ಮಯ್ಯನವರ ಅಭಿಪ್ರಾಯ.
ಈ ಕುರಿತು ಹೆಚ್ಚಿನ ಮಾಹಿತಿ ನೀಡಿದ ತಿಮ್ಮಯ್ಯ ಅವರು, ಕರ್ನಾಟಕದಲ್ಲಿ ಅತ್ತಿಬೆಲೆ ಟೋಲ್ ಫಾಸ್ಟ್ ಟ್ಯಾಗ್ ವಿತರಣೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದರು. ಫಾಸ್ಟ್ ಟ್ಯಾಗ್ ಅಳವಡಿಕೆಯಿಂದ ಗಂಟೆಗಟ್ಟಲೆ ಟೋಲ್ ಗಳಲ್ಲಿ ಕಾಯುವುದು ತಪ್ಪಿತೆಂದೂ ಫಾಸ್ಟ್ ಟ್ಯಾಗ್ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಸ್ಥಳೀಯ ವಾಹನ ಸವಾರರು ಕೆಲವೇ ಮೀಟರ್ ರಸ್ತೆ ಉಪಯೋಗಕ್ಕೆ ದುಡ್ಡು ತರಬೇಕೆ ಎಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.