ಕೆಲಸಕ್ಕಾಗಿ ಅಲೆದು, ಅಲೆದು ಸಾಕಾಗಿ ನೇಣಿಗೆ ಯುವತಿ ಶರಣು

Public TV
1 Min Read
garment worker A

ಬೆಂಗಳೂರು: ಕೆಲಸ ಸಿಗದೆ ಇರುವುದರಿಂದ ಜೀವನ ನಡೆಸಲು ಸಾಧ್ಯವಾಗದೆ ಯುವತಿಯೊಬ್ಬಳು ನೇಣಿಗೆ ಶರಣಾದ ಮನಕಲುಕುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

ಆನೇಕಲ್ ತಾಲೂಕಿನ ಅತ್ತಿಬೆಲೆಯ ನಾಗಲಿಂಗೇಶ್ವರ ದೇವಸ್ಥಾನದ ಬಳಿಯ ನಿವಾಸಿ ಮಂಜುಳಾ ಮೃತ ಯುವತಿ. ಮಂಜುಳಾ ತಾಯಿ, ತಂಗಿ ಹಾಗೂ ಬುದ್ಧಿಮಾಂದ್ಯ ತಮ್ಮನ ಜೊತೆಗೆ ವಾಸಿಸುತ್ತಿದ್ದರು. ಮಂಜುಳಾ ಬುದ್ಧಿಮಾಂದ್ಯ ತಮ್ಮನ ಎದುರಲ್ಲಿಯೇ ಇಂದು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

ಮಂಜುಳಾ ಮನೆಯ ಹಿರಿಯ ಮಗಳಾಗಿದ್ದರಿಂದ ಕುಟುಂಬದ ಜವಾಬ್ದಾರಿ ಹೊತ್ತಿದ್ದರು. ಖಾಸಗಿ ಗಾರ್ಮೆಂಟ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಂಜುಳಾ, ತಮಗೆ ಬರುತ್ತಿದ್ದ ವೇತನದಲ್ಲಿ ಕುಟುಂಬವನ್ನು ನಿರ್ವಹಿಸುತ್ತಿದ್ದರು. ಆದರೆ ಕಳೆದ ವಾರ ಕಂಪನಿಯವರು ಮಂಜುಳಾ ಅವರನ್ನು ಕೆಲಸದಿಂದ ತೆಗೆದು ಹಾಕಿದ್ದರು. ಇದರಿಂದಾಗಿ ಮಂಜುಳಾ ಸಂಕಷ್ಟಕ್ಕೆ ಸಿಲುಕಿದ್ದರು.

Bengaluru

ಕೆಲಸ ಅರಸಿ ಮಂಜುಳಾ ಕಳೆದ ಕೆಲವು ದಿನಗಳಿಂದ ಅನೇಕ ಕಂಪನಿಗಳಿಗೆ ಹೋಗಿದ್ದರು. ಆದರೆ ಎಲ್ಲಿಯೂ ಕೆಲಸ ಸಿಕ್ಕಿರಲಿಲ್ಲ. ಕೆಲಸವಿಲ್ಲದೆ ಜೀವನ ನಡೆಸಲು ಸಾಧ್ಯವಾಗದ ಅಸಹಾಯಕ ಸ್ಥಿತಿಗೆ ಮಂಜುಳಾ ಸಿಲುಕಿದ್ದರು. ಇದರಿಂದ ಮನನೊಂದು ಮಂಜುಳಾ, ತಾಯಿ ಮನೆಗೆ ಬೇಕಾದ ದಿನಸಿ ತರಲು ಅಂಗಡಿಗೆ ಹೋಗಿದ್ದಾಗ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ನೇಣು ಬಿಗಿದ ಸ್ಥಿತಿಯಲ್ಲಿದ್ದ ಮಗಳ ಮೃತದೇಹ ನೋಡಿದ ಮಂಜುಳಾ ಅವರ ತಾಯಿ ಗಾಬರಿಕೊಂಡಿದ್ದರು. ಅವರು ಅಳುತ್ತಿದ್ದ ಧ್ವನಿ ಕೇಳಿ ಮನೆಗೆ ಬಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅತ್ತಿಬೆಲೆ ಪೊಲೀಸರು ಮಂಜುಳಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಅತ್ತಿಬೆಲೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *