ಬೆಂಗಳೂರು: ಪಾಕ್ ಪರ ಘೋಷಣೆ ಕೂಗಿ ಪೊಲೀಸ್ ಕಸ್ಟಡಿಯಲ್ಲಿದ್ದ ದೇಶದ್ರೋಹಿ ಅಮೂಲ್ಯ ಲಿಯೋನಾಳಿಗೆ ಮತ್ತೆ ಐದು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ.
ನಾಲ್ಕು ದಿನಗಳ ಕಾಲ ಅಮೂಲ್ಯಳನ್ನು ಪೊಲೀಸ್ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಇವತ್ತು ಕೋರಮಂಗಲದ ನ್ಯಾಯಾಧೀಶರ ಮನೆಗೆ ಹಾಜರುಪಡಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಮಾರ್ಚ್ 5ರ ವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು. ಪಾಕ್ ಪರ ಘೋಷಣೆ ಕೂಗಿದ ನಂತರ 14 ದಿನಗಳ ಕಾಲ ಅಮೂಲ್ಯಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಅಮೂಲ್ಯಳ ಹೆಚ್ಚಿನ ವಿಚಾರಣೆ ಅವಶ್ಯಕತೆ ಇದ್ದ ಕಾರಣ, ಎಸ್‍ಐಟಿ ತಂಡ ರಚನೆಯಾಗಿ ನ್ಯಾಯಾಂಗ ಬಂಧನದಲ್ಲಿದ್ದ ಅಮೂಲ್ಯಳನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಪೊಲೀಸ್ ಕಸ್ಟಡಿ ವೇಳೆ ಕೆಲವೊಂದು ಸ್ಫೋಟಕ ಮಾಹಿತಿಗಳು ಲಭ್ಯವಾಗಿದ್ದು, ವಿವಿಧ ತಂಡಗಳ ತನಿಖಾಧಿಕಾಗಳು ಬೇರೆ ಬೇರೆ ಆಯಾಮಗಳಲ್ಲಿ ವಿಚಾರಣೆ ನಡೆಸಿದ್ದಾರೆ.
ಎಲ್ಲಾ ಆಯಾಮಗಳಲ್ಲಿ ವಿಚಾರಣೆ ನಡೆಸಿದ ಪೊಲೀಸರು, ಇಂದು ಮತ್ತೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮಾರ್ಚ್ ಐದರಂದು ಮತ್ತೆ ತನಿಖೆಗೆ ಅಮೂಲ್ಯ ಅಗತ್ಯಬಿದ್ದರೆ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ.