ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ ವೇಗೆ ನುಗ್ಗಿ ಪ್ರಯಾಣಿಕರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ ಘಟನೆ ನಡೆದಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್)ನಿಂದ ಥೈಲ್ಯಾಂಡ್‍ನ ಪುಕೆಟ್‍ಗೆ ತಡರಾತ್ರಿ 2:30 ಗಂಟೆಗೆ ಗೋ ಏರ್ ಬಸ್ ಪ್ರಯಾಣ ಬೆಳೆಸಬೇಕಿತ್ತು. ಆದರೆ ತಾಂತ್ರಿಕ ಸಮಸ್ಯೆಗಳಿಂದ ಗೋ ಏರ್ ಟೇಕಾಫ್ ಆಗದ ಕಾರಣ ಪುಕೆಟ್‍ಗೆ ಪ್ರಯಾಣಿಸಲು ಟಿಕೆಟ್ ಬುಕ್ ಮಾಡಿದ್ದ 120 ಮಂದಿ ಪ್ರಯಾಣಿಕರ ಆಕ್ರೋಶದ ಕಟ್ಟೆ ಒಡೆಯಿತು. ಪರ್ಯಾಯ ವಿಮಾನ ಕಲ್ಪಿಸುವುದಾಗಿ ವಿಮಾನ ನಿಲ್ದಾಣದ ಸಿಬ್ಬಂದಿ ತಿಳಿಸಿದ್ದರು. ಆದರೆ ತಡರಾತ್ರಿ 2:30ರಿಂದ ಕಾದ ಪ್ರಯಾಣಿಕರಿಗೆ ಬೆಳಗ್ಗೆ 8 ಗಂಟೆಯಾದರೂ ಪರ್ಯಾಯ ವಿಮಾನ ಕಲ್ಪಿಸುವ ಕೆಲಸ ಮಾಡಲಿಲ್ಲ.
ಕೆಲಸಕ್ಕೆ ಹಾಜರಾಗಿದ್ದ ಪೈಲಟ್ ಹಾಗೂ ಗಗನಸಖಿಯರು ಸಹ ಫ್ಲೈಟ್ ಟೇಕಾಫ್ ಆಗಲ್ಲ. ನಮ್ಮ ಕೆಲಸ ಮುಗಿಯಿತು ಅಂತ ಪ್ರಯಾಣಿಕರನ್ನು ಫ್ಲೈಟ್‍ನಲ್ಲೇ ಬಿಟ್ಟು ಹೊರಟು ಹೋದರು. ಇದರಿಂದ ಪ್ರಯಾಣಿಕರ ಆಕ್ರೋಶದ ಕಟ್ಟೆ ಒಡೆದು ಏಕಾಏಕಿ ರನ್ ವೇಗೆ ನುಗ್ಗಿ ಇತರೆ ವಿಮಾನಗಳ ಹಾರಾಟಕ್ಕೆ ಅಡ್ಡಿ ಉಂಟು ಮಾಡಲು ಯತ್ನಿಸಿದರು. ನಮಗೆ ವಿಮಾನ ಕಲ್ಪಿಸದೆ ಬೇರೆ ಯಾವುದೇ ವಿಮಾನ ಹಾರಾಟ ಮಾಡಬಾರದು ಅಂತ ಪ್ರತಿಭಟನಾಕಾರರು ಆಗ್ರಹಿಸಿದರು.
ಕೂಡಲೇ ಎಚ್ಚೆತ್ತ ಏರ್‌ಪೋರ್ಟ್ ಭದ್ರತಾ ಸಿಬ್ಬಂದಿ ರನ್ ವೇಗೆ ನುಗ್ಗಿದ್ದ ಪ್ರಯಾಣಿಕರನ್ನು ವಾಪಸ್ ಕರೆತಂದಿದ್ದಾರೆ. ಬಳಿಕ ಪ್ರಯಾಣಿಕರು ಹಾಗೂ ಗೋ ಏರ್ ಸಿಬ್ಬಂದಿ ನಡುವೆ ವಾಗ್ವಾದ ನಡೆಯಿತು. ಪುಕೆಟ್‍ಗೆ ಮತ್ತೊಂದು ವಿಮಾನ ಹಾರಾಟ ಮಾಡಲು ಬಿಸಿಎಎಸ್‍ನಿಂದ ಅನುಮತಿ ಸಿಕ್ಕಿಲ್ಲ. ಹೀಗಾಗಿ ಪುಕೆಟ್‍ಗೆ ತೆರಳಬೇಕಿದ್ದ ಪ್ರಯಾಣಿಕರು ಏರ್‌ಪೋರ್ಟ್ ನಲ್ಲೇ ಪರದಾಡುವಂತಾಗಿದೆ.