ತುಳುನಾಡಿನ ದೈವಕ್ಕೆ `ಹೆಣ್ಣು ದೆವ್ವ’ ಎಂದು ಕರೆದು ಅಪಮಾನ ಮಾಡಿದ ಆರೋಪದ ಹಿನ್ನೆಲೆ ರಣವೀರ್ ಸಿಂಗ್ (Ranveer Singh) ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಇದಕ್ಕೆ ನಟ ಕ್ಷಮೆಯನ್ನೂ ಕೇಳಿದ್ದಾರೆ. ಆದರೆ ಕರಾವಳಿಯ ದೈವಗಳ ಬಗ್ಗೆ ವೇದಿಕೆಯಲ್ಲಿ ತಪ್ಪಾಗಿ ಮಾತನಾಡಿ ದೈವಗಳನ್ನು ಅನುಕರಣೆ ಮಾಡಿದ್ದಕ್ಕೆ ಮತ್ತೊಂದು ಸಂಕಷ್ಟಕ್ಕೆ ಎದುರಾಗಿದೆ. ನಟ ರಣವೀರ್ ವಿರುದ್ಧ ಬೆಂಗಳೂರಿನಲ್ಲಿ (Bengaluru) ದೂರು ದಾಖಲಾಗಿದೆ.
ಗೋವಾದಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ರಣ್‌ವೀರ್ ಸಿಂಗ್ ದೈವಗಳನ್ನು ಅವಮಾನಿಸಿದ್ದು, ಭಕ್ತರು ಹಾಗೂ ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿತ್ತು. ರಣವೀರ್ ಸಿಂಗ್ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದರು. ಎರಡು ದಿನಗಳ ಹಿಂದೆ ಹಿಂದು ಜನಜಾಗೃತಿ ಸಮಿತಿ ರಣವೀರ್ ಸಿಂಗ್ ವಿರುದ್ಧ ಗೋವಾದ ಪಣಜಿಯಲ್ಲಿ ದೂರು ದಾಖಲಿಸಿದ್ದರು. ಮಂಗಳೂರಿನ ಕದ್ರಿ ಮಂಜುನಾಥನ ಸನ್ನಿಧಿಗೆ ಬಂದು ಕ್ಷಮೆ ಕೇಳಬೇಕು ಎಂದು ತುಳುನಾಡ ದೈವಾರಾಧಕರು ಪಟ್ಟು ಹಿಡಿದಿದ್ದರು. ಇದನ್ನೂ ಓದಿ: ರಿಷಬ್ ಅದ್ಭುತ ಅಭಿನಯ ತೋರಿಸೋದು ಉದ್ದೇಶವಾಗಿತ್ತು, ನೋವಾಗಿದ್ದರೆ ಕ್ಷಮಿಸಿ – ರಣವೀರ್ ಸಿಂಗ್
ಇದೀಗ ರಣ್‌ವೀರ್ ಸಿಂಗ್ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಬೆಂಗಳೂರಿನಲ್ಲಿ ದೂರು ದಾಖಲಾಗಿದೆ. ವಕೀಲ ಪ್ರಶಾಂತ್ ಮೇತಲ್ ಎಂಬುವವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ರಣವೀರ್ ಸಿಂಗ್ ವಿರುದ್ಧ ದೂರು ನೀಡಿ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿದ್ದಾರೆ. ರಣವೀರ್ ಸಿಂಗ್ ಕ್ಷಮೆ ಕೇಳಿದ್ದಾರೆ ಇದನ್ನ ಒಪ್ಪಲು ಸಾಧ್ಯವಿಲ್ಲ. ಅವರಿಗೆ ದಂಡನಾರ್ಹ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

