ಬೆಂಗಳೂರು: ಇತ್ತೀಚೆಗೆ ಆಡುಗೋಡಿಯ (Adugodi) ಅಂಗಡಿಯೊಂದರಲ್ಲಿ ಖೋಟಾನೋಟು (Fake Currency Case) ನೀಡಿ ಅಕೌಂಟ್‌ಗೆ ದುಡ್ಡು ಹಾಕಿಸಿಕೊಳ್ಳಲು ಬಂದು ಮೂವರು ಆರೋಪಿಗಳು ಪೊಲೀಸರ ಅತಿಥಿಯಾಗಿದ್ದರು. ಇದೀಗ ಪಶ್ಚಿಮ ಬಂಗಾಳಕ್ಕೆ ತೆರಳಿ ಆರೋಪಿಗಳ ಮನೆ ಪರಿಶೀಲಿಸಲು ರಾಜ್ಯದ ಪೊಲೀಸರು ಮುಂದಾಗಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಸುಮನ್, ಗುಲಾಮ್ ಹಾಗೂ ಆತನ ಸ್ನೇಹಿತ ಗುಹಾವಟಿ ಎಕ್ಸ್‌ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ಗಾರೆ ಕೆಲಸಕ್ಕಾಗಿ ಬರುತ್ತಿದ್ದಾಗ, ಸುಮನ್‌ಗೆ ರೈಲಿನ ಟಾಯ್ಲೆಟ್‌ನಲ್ಲಿದ್ದ ಬ್ಯಾಗ್‌ನಲ್ಲಿ ನೋಟುಗಳ ರಾಶಿ ಕಂಡಿತ್ತು. ಕೂಡಲೇ ಆತ ಸ್ನೇಹಿತ ಗುಲಾಮ್‌ಗೆ ತೋರಿಸಿದ್ದ. ಬಳಿಕ ಬ್ಯಾಗ್‌ನ್ನು ಸೀದಾ ಬೆಂಗಳೂರಿಗೆ ತಂದಿದ್ದರು. ಬಳಿಕ ಆಡುಗೋಡಿಯ ಸುರೇಶ್ ಎನ್ನುವವರ ಅಂಗಡಿಗೆ ಹೋಗಿ 70 ಸಾವಿರ ರೂ. ನಕಲಿ ನೋಟುಗಳನ್ನ ಕೊಟ್ಟು, ಹಣಕ್ಕೆ ಕಮೀಷನ್ ಇಟ್ಕೊಂಡು ಅಕೌಂಟ್‌ಗೆ ಹಾಕುವಂತೆ ಕೇಳಿದ್ದರು.
ಹಣ ಎಣಿಸುವಾಗ ನೋಟುಗಳ ಸೀರಿಯಲ್ ನಂಬರ್ ಒಂದೇ ರೀತಿಯಲ್ಲಿರುವುದನ್ನು ಗಮನಿಸಿದ ಅಂಗಡಿ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದ. ಆರೋಪಿಗಳ ವಿಚಾರಣೆ ವೇಳೆ ರೈಲಿನಲ್ಲಿ ಖೋಟಾನೋಟು ಸಿಕ್ಕಿರೋದು ಖಚಿತವಾಗಿದೆ. ಆದರೂ ಸಹ ಆರೋಪಿಗಳನ್ನು ಪಶ್ಚಿಮ ಬಂಗಾಳದ (West Bengal) ಮನೆಗೆ ತೆರಳಿ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.