ಕೋಲ್ಕತ್ತಾ: ಇಲ್ಲಿನ ಅಶೋಕ ನಗರದಲ್ಲಿರೋ ತನ್ನ ಕೋಣೆಯ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಬೆಂಗಾಲಿ ಕಿರುತೆರೆ ನಟಿಯೊಬ್ಬರ ಮೃತದೇಹ ಪತ್ತೆಯಾಗಿದೆ.
23 ವರ್ಷದ ಮೌಮಿತ ಸಹಾ ಅವರು ದಕ್ಷಿಣ ಕೋಲ್ಕತ್ತಾದ ಅಶೋಕ ನಗರದ ರೀಜೆಂಟ್ ಪಾರ್ಕ್ ಪ್ರದೇಶದ ಫ್ಲಾಟ್ ನಲ್ಲಿ ಬಾಡಿಗೆಗೆ ಒಬ್ಬರೇ ವಾಸಿಸುತ್ತಿದ್ದರು ಎಂಬುದಾಗಿ ವರದಿಯಾಗಿದೆ.
ಶುಕ್ರವಾರ ರಾತ್ರಿ ಮೌಮಿತಾ ಅವರ ತಂದೆ ಮಗಳಿಗೆ ಕರೆ ಮಾಡಿದ್ದಾರೆ. ಆದ್ರೆ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗುತ್ತಿರಲಿಲ್ಲ. ಇದರಿಂದ ಆತಂಕಗೊಂಡ ಮೌಮಿತಾ ತಂದೆ ಮನೆ ಮಾಲೀಕನಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಮನೆ ಮಾಲೀಕ 10 ಗಂಟೆ ಸುಮಾರಿಗೆ ಮೌಮಿತಾ ಇದ್ದ ರೂಮ್ ನ ಬಾಗಿಲು ಒಡೆದಿದ್ದಾರೆ. ಈ ವೇಳೆ ಮೌಮಿತಾ ಫ್ಯಾನ್ ಗೆ ತನ್ನ ದುಪ್ಪಟ್ಟದಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕೋಣೆಯಲ್ಲಿ ಆತ್ಮಹತ್ಯಾ ಪತ್ರವೊಂದು ಪೊಲೀಸರ ಕೈಗೆ ಸಿಕ್ಕಿದೆ. ಪತ್ರದಲ್ಲಿ ತಾನು ಮಾಡುತ್ತಿರುವ ವೃತ್ತಿಯಲ್ಲಿ ಯಾವುದೇ ಯಶಸ್ಸು ಕಾಣದಿರುವುದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಬರೆದುಕೊಂಡಿದ್ದಾರೆ. ಆದ್ರೆ ಈ ಬಗ್ಗೆ ಯಾವುದೇ ಕೇಸು ದಾಖಲಾಗಿಲ್ಲ. ಸದ್ಯ ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಕಳುಹಿಸಲಾಗಿದ್ದು, ಅಸಹಜ ಸಾವು ಎಂದು ಶಂಕಿಸಲಾಗಿದೆ ಅಂತ ಉಪ ಪೊಲೀಸ್ ಆಯುಕ್ತ ನಿಂಬಾಳ್ಕರ್ ಸಂತೋಷ್ ಉತ್ತಮ್‍ರಾವ್ ತಿಳಿಸಿದ್ದಾರೆ.
ಮೌಮಿತಾ ಅವರ ಮೊಬೈಲ್ ಫೋನನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಕರೆಗಳ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಒಟ್ಟಿನಲ್ಲಿ ಮರಣೋತ್ತರ ಪರೀಕ್ಷೆಯ ವರದಿಯ ಬಳಿಕವಷ್ಟೇ ಹೆಚ್ಚಿನ ಮಾಹಿತಿ ತಿಳಿಯಬಹುದಾಗಿದೆ ಎನ್ನಲಾಗಿದೆ.
ಚಿತ್ರರಂಗದಲ್ಲಿ ಅವರು ಯಶಸ್ಸು ಕಾಣದೇ ಇದ್ದ ಹಿನ್ನೆಲೆಯಲ್ಲಿ ಮೌಮಿತಾ ಮಾನಸಿಕ ಖಿನ್ನತೆಗೊಳಗಾಗಿದ್ದರು ಎಂದು ಅವರ ಆಪ್ತ ವಲಯದ ಮಾಹಿತಿಯನ್ನು ಉಲ್ಲೇಖಿಸಿ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿದೆ.