ನೇಣು ಬಿಗಿದ ಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತನ ಶವ ಪತ್ತೆ

Public TV
2 Min Read
bjp worker note updated

ಕೊಲ್ಕತ್ತಾ: ಬಿಜೆಪಿ ಕಾರ್ಯಕರ್ತನನ್ನು ಅಪಹರಿಸಿ ಕೊಲೆ ಮಾಡಿ ನೇಣು ಹಾಕಿರುವ ಘಟನೆ ಪಶ್ಚಿಮ ಬಂಗಾಳದ ಪುರುಲಿಯ ಜಿಲ್ಲೆಯ ಬಲರಾಮ್‍ಪುರ ಪ್ರದೇಶದಲ್ಲಿ ನಡೆದಿದೆ.

ಪುರುಲಿಯಾ ಜಿಲ್ಲೆಯ ಬಲರಾಮ್‍ಪುರ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ ಮರಕ್ಕೆ ನೇಣುಹಾಕಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಸ್ಥಳದಲ್ಲಿ ದೊರೆತ ಮಾಹಿತಿ ಆಧರಿಸಿ ಮೃತ ವ್ಯಕ್ತಿಯು ಸ್ಥಳೀಯ ಬಿಜೆಪಿ ಕಾರ್ಯಕರ್ತನೆಂದು ತಿಳಿದು ಬಂದಿದೆ. ಮೃತ ವ್ಯಕ್ತಿಯ ಟೀಶರ್ಟ್ ಮೇಲೆ “ಬಿಜೆಯ ಅಧಿಕಾರ 18 ವರ್ಷಮಾತ್ರ” ಎಂದು ಬರೆದಿದ್ದು, ಹಾಗೂ ಬಿಜೆಪಿ ಪರ ಕೆಲಸ ಮಾಡುವ ಕಾರ್ಯಕರ್ತರಿಗೆ ಇದೇ ಶಿಕ್ಷೆ ಎಂಬ ಪತ್ರ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವ್ಯಕ್ತಿಯು 21 ವರ್ಷದ ತ್ರಿಲೋಚನ್ ಮಹಾಟೊ ಆಗಿದ್ದು, ಈತ ಬಲರಾಮ್‍ಪುರದ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎ ಪದವಿ ವ್ಯಾಸಂಗ ಮಾಡುತ್ತಿದ್ದು, ಸ್ಥಳೀಯ ಬಿಜೆಪಿ ಯುವ ಮೋರ್ಚಾ ಘಟಕದ ಸದಸ್ಯನಾಗಿದ್ದ.

ಈ ಕುರಿತಂತೆ ತ್ರಿಲೋಚನ್ ತಂದೆ ಹರಿರಾಮ್ ಮಹಾಟೊ ಮಾತನಾಡಿ, ಮಗ ಮಂಗಳವಾರದಂದು ಕೆಲಸದ ನಿಮಿತ್ತ ಮನೆಯಿಂದ ತೆರಳಿದ್ದು, ಸಂಜೆ ಹೊತ್ತಿಗೆ ಬರುತ್ತೇನೆಂದು ತನ್ನ ಅಣ್ಣನ ಬಳಿ ಹೇಳಿ ಹೋಗಿದ್ದನು. ಇದ್ದಕ್ಕಿದ್ದ ಹಾಗೆ ಸಂಜೆ 8 ಗಂಟೆಗೆ ಫೋನ್ ಮಾಡಿ ಯಾರೋ ನನ್ನನ್ನು ಅಪಹರಿಸಿಕೊಂಡು ಹೋಗುತ್ತಿದ್ದಾರೆಂದು ಹೇಳಿದ್ದ. ಕೂಡಲೇ ನಾವು ಪೊಲೀಸರಿಗೆ ದೂರು ನೀಡಿ ಹುಡುಕಿಸಿದರೂ ಆತನ ಸುಳಿವು ಸಿಗಲಿಲ್ಲ. ಬುಧವಾರ ಬೆಳಿಗ್ಗೆ ಮನೆಯ ಸಮೀಪ ನೇಣು ಬಿಗಿದ ಸ್ಥಿತಿಯಲ್ಲಿ ಆತನ ಶವ ಸಿಕ್ಕಿದೆ. ಆತನನ್ನು ಅಪಹರಿಸಿದವರೆ ಕೊಲೆ ಮಾಡಿ ನೇಣಿಗೆ ಹಾಕಿದ್ದಾರೆಂದು ಆರೋಪಿಸಿದ್ದಾರೆ.

ಬಿಜೆಪಿ ನಾಯಕನ ಹತ್ಯೆಗೆ ಕುರಿತಂತೆ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕಿಡಿಕಾರಿದ್ದು, ಬಿಜೆಪಿ ನಾಯಕನ ಹತ್ಯೆಗೆ ತೃಣಮೂಲ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದಾರೆ. ಕಾರ್ಯಕರ್ತನನ್ನು ಕ್ರೂರವಾಗಿ ಕೊಲ್ಲಲಾಗಿದ್ದು, ಈ ಘಟನೆಯಿಂದ ನಮಗೆ ತೀವ್ರ ನೋವುಂಟಾಗಿದೆ ಎಂದು ತಮ್ಮ ಟ್ವೀಟ್ಟರ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಚಕ್ರವರ್ತಿಯವರು ತ್ರಿಲೋಚನ್ ಕೊಲೆಗೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರೇ ಕಾರಣ ಎಂದಿದ್ದಾರೆ. ಬಲರಾಮ್‍ಪುರದ ಶಾಸಕ ಶಾಂತಿರಾಮ್ ಮಹಾಟೊ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಕೊಲೆಗೆ ಕೌಟುಂಬಿಕ ಕಾರಣ ಕಂಡುಬಂದಿದ್ದು, ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆದಿಲ್ಲ, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪುರುಲಿಯಾ ಎಸ್‍ಪಿ ಜಾಯ್ ಬಿಸ್ವಾನ್‍ರವರು ಹೇಳಿಕೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *