ಕೋಲ್ಕತ್ತಾ: ಸಂದೇಶ್‌ಖಾಲಿ (Sandeshkhali) ಪ್ರಕರಣ ಪ್ರಮುಖ ಆರೋಪಿ ಶೇಖ್ ಶಹಜಹಾನ್‌ನನ್ನು ಸಿಬಿಐಗೆ ಒಪ್ಪಿಸುವ ವಿಚಾರದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಮುಖಭಂಗ ಉಂಟಾಗಿದೆ. ಕೊಲ್ಕತ್ತಾ ಹೈಕೋರ್ಟ್ (Calcutta High Court) ಗರಂ ಆಗಿ ಗಡುವು ನೀಡಿದ ಹಿನ್ನೆಲೆಯಲ್ಲಿ ಶೇಖ್ ಶಹಜಹಾನ್‌ನನ್ನು ಪೊಲೀಸರು ಸಿಬಿಐ ವಶಕ್ಕೆ ಒಪ್ಪಿಸಿದ್ದಾರೆ.
ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಇ.ಡಿ ಅಧಿಕಾರಿಗಳ ಮೇಲೆ ದಾಳಿ, ಬುಡಕಟ್ಟು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ರೈತರ ಕೃಷಿ ಜಮೀನು ಅತಿಕ್ರಮಣ ಸೇರಿ ಹಲವು ಪ್ರಕರಣಗಳಲ್ಲಿ ಬಂಧಿತನಾಗಿರುವ ಟಿಎಂಸಿ ಉಚ್ಚಾಟಿತ ನಾಯಕ ಶೇಖ್ ಶಹಜಹಾನ್‌ನನ್ನು (Sheikh Shahjahan) ಸಿಬಿಐ ಕಸ್ಟಡಿಗೆ ವಹಿಸಬೇಕು ಎಂದು ಕೋಲ್ಕೊತಾ ಹೈಕೋರ್ಟ್ ಮತ್ತೆ ಆದೇಶ ಹೊರಡಿಸಿತು. ನಂತರ ಸಿಬಿಐ (CBI) ಅಧಿಕಾರಿಗಳು ಕೋಲ್ಕತ್ತಾದಲ್ಲಿರುವ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಶಹಜಹಾನ್‌ನನ್ನ ವಶಕ್ಕೆ ಪಡೆದರು.
Advertisement
Advertisement
ಶೇಖ್ ಶಹಜಹಾನ್‌ನನ್ನು ಮಂಗಳವಾರವೇ (ಮಾರ್ಚ್ 5) ಸಿಬಿಐ ವಶಕ್ಕೆ ನೀಡಬೇಕು. ಇ.ಡಿ ಅಧಿಕಾರಿಗಳ ಮೇಲೆ ದಾಳಿ, ಲೈಂಗಿಕ ದೌರ್ಜನ್ಯ ಸೇರಿ ಎಲ್ಲ ಪ್ರಕರಣಗಳ ಕುರಿತ ದಾಖಲೆಗಳನ್ನು ಕೂಡ ಸಿಬಿಐ ಅಧಿಕಾರಿಗಳಿಗೆ ನೀಡಬೇಕು ಎಂದು ಕೋಲ್ಕತ್ತಾ ಹೈಕೋರ್ಟ್ ಆದೇಶಿಸಿತ್ತು. ಆದರೆ, ಶೇಖ್ ಶಹಜಹಾನ್‌ನನ್ನು ಸಿಬಿಐಗೆ ವಹಿಸಲು ಪಶ್ಚಿಮ ಬಂಗಾಳ ಸರ್ಕಾರ ನಿರಾಕರಿಸಿತ್ತು. ಅಷ್ಟೇ ಅಲ್ಲ, ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಆದರೆ, ಕೋಲ್ಕೊತಾ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತು, ಜೊತೆಗೆ ತುರ್ತು ವಿಚಾರಣೆಗೆ ನಿರಾಕರಿಸಿತು. ಆದ್ದರಿಂದಾಗಿ ಮತ್ತೆ ಹೈಕೋರ್ಟ್ ಸಿಬಿಐಗೆ ಒಪ್ಪಿಸುವಂತೆ ಆದೇಶಿಸಿತು.
Advertisement
Advertisement
ಈ ನಡುವೆ ಶಹಜಹಾನ್ ಶೇಖ್‌ಗೆ ಸಂಬಂಧಿಸಿದ 12.78 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇ.ಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಸಂದೇಶ್‌ಖಾಲಿಯಲ್ಲಿರುವ ಕೃಷಿ ಭೂಮಿ, ಕೋಲ್ಕತ್ತಾದಲ್ಲಿರುವ ಅಪಾರ್ಟ್ಮೆಂಟ್, ಬ್ಯಾಂಕ್ ಠೇವಣಿ ಸೇರಿ ಹಲವು ಆಸ್ತಿಗಳನ್ನು ಇ.ಡಿ ಜಪ್ತಿ ಮಾಡಿದೆ. ಇದರಿಂದಾಗಿ ಶಹಜಹಾನ್ ಶೇಖ್‌ಗೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ.