ಬೆಳಗಾವಿ: ಜಿಲ್ಲೆಯ 18 ಕ್ಷೇತ್ರಗಳ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ (BJP Election Ticket) ಘೋಷಣೆ ಮಾಡಿದ್ದು ಈ ಪೈಕಿ 8 ಕ್ಷೇತ್ರಗಳಲ್ಲಿ ಬಂಡಾಯ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಬೆಳಗಾವಿ ಜಿಲ್ಲೆಯ (Belagavi Constituency) ಅಥಣಿ, ಯಮಕನಮರಡಿ, ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ, ಖಾನಾಪುರ, ಬೈಲಹೊಂಗಲ, ಸವದತ್ತಿ, ರಾಮದುರ್ಗದಲ್ಲಿ ಬಂಡಾಯ ಸಾಧ್ಯತೆ ಇದೆ. ಬೆಳಗಾವಿ ಜಿಲ್ಲೆಯ 13 ಬಿಜೆಪಿ ಶಾಸಕರ ಪೈಕಿ ಇಬ್ಬರಿಗೆ ಕೊಕ್ ಕೊಡಲಾಗಿದ್ದು ರಾಮದುರ್ಗ ಬಿಜೆಪಿ ಶಾಸಕ ಮಹಾದೇವಪ್ಪ ದೊಡವಾಡ, ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ ಅವರನ್ನು ಕೈಬಿಡಲಾಗಿದೆ. ಇದನ್ನೂ ಓದಿ: ಬಿಜೆಪಿಗೆ ಲಕ್ಷ್ಮಣ ಸವದಿ ಗುಡ್‍ಬೈ – ಶೀಘ್ರವೇ ಕಾಂಗ್ರೆಸ್ ಸೇರ್ಪಡೆ?
ಬೆಳಗಾವಿ ಉತ್ತರ, ರಾಮದುರ್ಗ ಕ್ಷೇತ್ರದಲ್ಲಿ ತಡರಾತ್ರಿ ಶಾಸಕರ ಬೆಂಬಲಿಗರು ಪ್ರತಿಭಟನೆ ಮಾಡಿದ್ದು, ರಾಮದುರ್ಗದಲ್ಲಿ ಇಂದೂ ಮಹಾದೇವಪ್ಪ ಯಾದವಾಡ ಬೆಂಬಲಿಗರು ಪ್ರತಿಭಟನೆಗೆ ಮುಂದಾಗಿದ್ದಾರೆ. ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ರಾತ್ರಿಯೇ ಮಹಾದೇವಪ್ಪ ಯಾದವಾಡ ಬೆಂಗಳೂರಿಗೆ ತೆರಳಿದ್ದಾರೆ.
ಇತ್ತ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಶಾಸಕ ಅನಿಲ್ ಬೆನಕೆ (Anil Benake) ಬೆಂಬಲಿಗರಲ್ಲಿ ಅಸಮಾಧಾನ ಭುಗಿಲೆದ್ದಿದೆ. ತಡರಾತ್ರಿ ಬೆಳಗಾವಿಯ ಚೆನ್ನಮ್ಮ ವೃತ್ತ, ಸಂಸದೆ ಮಂಗಲ ಅಂಗಡಿ ಮನೆ ಎದುರು ಅನಿಲ್ ಬೆನಕೆ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಜನ ನನ್ನನ್ನು ತೇಲು ಅಂದ್ರೆ ತೇಲುತ್ತೇನೆ, ಮುಳುಗು ಅಂದ್ರೆ ಮುಳುಗುತ್ತೇನೆ: ಸವದಿ
ಮತ್ತೊಂದೆಡೆ ಯಮಕನಮರಡಿ ಬಿಜೆಪಿ ಟಿಕೆಟ್ ಕೈ ತಪ್ಪಿದ್ದಕ್ಕೆ ಮಾರುತಿ ಅಷ್ಟಗಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದು ಮಧ್ಯರಾತ್ರಿ ಬೆಳಗಾವಿ ಬಿಜೆಪಿ ಕಚೇರಿ ಎದುರು ಮಾರುತಿ ಅಷ್ಟಗಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.
18 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಬಿಜೆಪಿ ಮಣೆ ಹಾಕಿದೆ. ಹುಕ್ಕೇರಿ ಕ್ಷೇತ್ರಕ್ಕೆ ನಿಖಿಲ್ ಕತ್ತಿ, ಯಮಕನಮರಡಿ ಕ್ಷೇತ್ರಕ್ಕೆ ಬಸವರಾಜ ಹುಂದ್ರಿ, ಬೆಳಗಾವಿ ಉತ್ತರ ಮತಕ್ಷೇತ್ರಕ್ಕೆ ಡಾ.ರವಿ ಪಾಟೀಲ್, ಬೆಳಗಾವಿ ಗ್ರಾಮೀಣ ಮತಕ್ಷೇತ್ರಕ್ಕೆ ನಾಗೇಶ್ ಮನ್ನೋಳಕರ್, ಸವದತ್ತಿ ವಿಧಾನಸಭೆ ಮತಕ್ಷೇತ್ರಕ್ಕೆ ಆನಂದ ಮಾಮನಿ ಹಾಗೂ ರಾಮದುರ್ಗ ಮತಕ್ಷೇತ್ರಕ್ಕೆ ಚಿಕ್ಕರೇವಣ್ಣಗೆ ಟಿಕೆಟ್ ನೀಡಲಾಗಿದೆ.