ಬೆಂಗಳೂರು: ನಾನು ವಿಜಯನಗರ ಪ್ರತ್ಯೇಕ ಜಿಲ್ಲೆಯಾಗಬೇಕೆಂಬ ಬೇಡಿಕೆಯನ್ನು ಕೈಬಿಟ್ಟಿಲ್ಲ. ಇದೀಗ ಸಚಿವನಾದರೂ ಆ ಬೇಡಿಕೆ ಕೈಬಿಡೋ ಪ್ರಶ್ನೆಯೇ ಇಲ್ಲ ಎಂದು ಅರಣ್ಯ ಮತ್ತು ಜೈವಿಕ ಪರಿಸರ ಖಾತೆ ಸಚಿವ ಆನಂದ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ಶಕ್ತಿಭವನದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ತಮ್ಮ ಇಲಾಖೆಯ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಚಿವ ಆನಂದ್ ಸಿಂಗ್ ಭಾಗವಹಿಸಿದ್ದರು. ಬಳಿಕ ಮಾಧ್ಯಮಗಳ ಜೊತೆ ಮಾತಾಡಿದ ಸಚಿವ ಆನಂದ್ ಸಿಂಗ್, ವಿಜಯನಗರ ಪ್ರತ್ಯೇಕ ಜಿಲ್ಲೆಯ ಬೇಡಿಕೆ ಕೈಬಿಡಲ್ಲ. ಜಿಲ್ಲಾ ರಚನೆ ಬೇಡಿಕೆ ಬಗ್ಗೆ ಮಾತಾಡಲು ಇದು ಸಂದರ್ಭ ಅಲ್ಲ. ಸಮಯ ಬಂದಾಗ ಜಿಲ್ಲೆ ರಚನೆ ಬಗ್ಗೆ ಸಿಎಂ ಜೊತೆ ಮಾತುಕತೆ ನಡೆಸ್ತೇನೆ. ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆಯಾಗುವ ವಿಶ್ವಾಸ ನನಗೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
Advertisement
ಖಾತೆ ಅತೃಪ್ತಿ ಇಲ್ಲ:
ಖಾತೆ ಬದಲಾವಣೆ ಆದ ವಿಚಾರ ಬಗ್ಗೆ ಮಾತಾಡಿದ ಅವರು, ಯಾವ ಶಾಸಕ ಯಾವ ಖಾತೆ ನಿಭಾಯಿಸ್ತಾರೆ ಅಂತ ಸಿಎಂಗೆ ಗೊತ್ತಿದೆ. ನಾನು ಖಾತೆ ಬದಲಾವಣೆಗೆ ಬೇಡಿಕೆ ಇಟ್ಟಿರಲಿಲ್ಲ. ಅಥವಾ ಇಂಥದ್ದೇ ಖಾತೆ ಬೇಕು ಅಂತನೂ ಕೇಳಿರಲಿಲ್ಲ. ಆಹಾರ ಇಲಾಖೆ ಕೊಟ್ಟಿದ್ರು. ಬಳಿಕ ಬೇಡ ಅರಣ್ಯ ಖಾತೆ ನಿಭಾಯಿಸು ಅಂತ ಅರಣ್ಯ ಇಲಾಖೆ ಕೊಟ್ರು. ಅರಣ್ಯ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸ್ತೇನೆ. ನನಗೆ ಹೆಚ್ಚುವರಿ ಖಾತೆ ಕೊಡುವ ಚರ್ಚೆಯಾಗಿಲ್ಲ. ನನಗೆ ಖಾತೆ ವಿಚಾರದಲ್ಲಿ ಯಾವುದೇ ಅಸಮಾಧಾನ ಇಲ್ಲ. ಖಾತೆ ವಿಚಾರದಲ್ಲಿ ನನಗೆ ಸಂಪೂರ್ಣ ತೃಪ್ತಿ ಇದೆ ಎಂದು ಇದೇ ವೇಳೆ ಆನಂದ್ ಸಿಂಗ್ ಹೇಳಿದರು.
Advertisement
Advertisement
ಕೇಸ್ ಗಳಿರೋದು ಸಹಜ:
ಆನಂದ್ ಸಿಂಗ್ ಮೇಲೆ ಅರಣ್ಯ ನಿಯಮಗಳ ಉಲ್ಲಂಘನೆ ಆರೋಪವಿದ್ದು ಕೆಲವು ಪ್ರಕರಣಗಳು ಅವರ ವಿರುದ್ಧ ದಾಖಲಾಗಿವೆ. ಆನಂದ್ ಸಿಂಗ್‍ರಿಗೆ ಅರಣ್ಯ ಇಲಾಖೆ ಸಿಕ್ಕಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ಧ ಪೋಸ್ಟ್ ಗಳು ಬರಲಾರಂಭಿಸಿದವು. ಅರಣ್ಯ ನಿಯಮಗಳನ್ನು ಉಲ್ಲಂಘಿಸಿದವರಿಗೆ ಅರಣ್ಯ ಖಾತೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಕಾಲೆಳೆದರು.
ಈ ವಿಚಾರದ ಬಗ್ಗೆ ಮಾತಾಡಿದ ಸಚಿವ ಆನಂದ್ ಸಿಂಗ್, ಹೌದು ನಮ್ಮ ಮೇಲೆ ಮೊದಲಿಂದಲೂ ಕೇಸ್‍ಗಳಿವೆ ಎಂದು ಒಪ್ಪಿಕೊಂಡರು. ಸಣ್ಣಪುಟ್ಟ ಉಲ್ಲಂಘನೆಗಳಲ್ಲಿ ಕೇಸ್‍ಗಳಿವೆ. ವಾಹನ ಇದ್ದವರ ಮೇಲೆ ಕೇಸ್‍ಗಳಿರುವ ಹಾಗೆನೇ ನಮ್ಮ ಮೇಲೂ ಅರಣ್ಯ ಪ್ರಕರಣಗಳಲ್ಲಿ ಕೇಸ್‍ಗಳಿವೆ. ನಮ್ಮದು ಗಣಿ ವ್ಯವಹಾರದ ಕುಟುಂಬವಾಗಿರುವುದರಿಂದ ಕೇಸ್‍ಗಳಿರೋದು ಸಹಜ ಎಂದು ಸ್ಪಷ್ಟನೆ ಕೊಟ್ರು.