ಬೆಂಗಳೂರು: ಸುಳ್ಳು ಕೇಸ್ ಹಾಕಿದ್ದ ಪೊಲೀಸರು ಮೇಲಿನ ಸೇಡಿಗೆ 118 ಕಾರ್ ಕದ್ದಿದ್ದ ಅಂತರಾಜ್ಯ ಕಳ್ಳನನ್ನು ಹುಳಿಮಾವು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಪರಮೇಶ್ವರ್ ಆರಮುಗಂ ಎಂದು ಗುರುತಿಸಲಾಗಿದ್ದು, ಈತನ ಜೊತೆ ಕಳ್ಳತನಕ್ಕೆ ಸಹಾಯ ಮಾಡಿದ್ದ ಸದ್ದಾಂಹುಸೇನ್ ಎಂಬಾತನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಈ ಖದೀಮರು ಯುನಿವರ್ಸಲ್ ರಿಮೋಟ್ ಬಳಸಿ ದುಬಾರಿ ಕಾರುಗಳನ್ನು ಕಳ್ಳತನ ಮಾಡುತ್ತಿದ್ದರು. ಈಗ 1.70 ಕೋಟಿ ಮೌಲ್ಯದ 10ಕ್ಕೂ ಹೆಚ್ಚು ಐಶಾರಾಮಿ ಕಾರುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
Advertisement
Advertisement
ಮೂರು ವರ್ಷದ ಹಿಂದೆ ಆರೋಪಿ ಪರಮೇಶ್ವರ್ ನನ್ನು ಪಿಟಿ ಕೇಸ್ ಮೇಲೆ ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಆದರೆ ನಂತರ ಇವನ ಮೇಲೆ ಸ್ಕಾರ್ಪಿಯೊ ಕಾರು ಕದ್ದಿದ್ದಾನೆ ಎಂದು ಸುಳ್ಳು ಕೇಸ್ ಹಾಕಿ ಜೈಲಿಗೆ ಕಳುಹಿಸಿದ್ದರು. ಈ ವಿಚಾರಕ್ಕೆ ಜೈಲಿಗೆ ಹೋಗಿದ್ದ ಪರಮೇಶ್ವರ್ ಸುಳ್ಳು ಕೇಸ್ ಹಾಕಿ ಜೈಲಿಗೆ ಕಳುಹಿಸಿದ ಪೊಲೀಸರ ಮೇಲೆ ಸೇಡು ಇಟ್ಟುಕೊಂಡಿದ್ದನು. ಜೈಲಿನಿಂದ ಹೊರ ಬಂದ ಪರಮೇಶ್ವರ್ ಸುಳ್ಳು ಕೇಸ್ ಹಾಕಿದ್ದಕ್ಕೆ ಮೂರೇ ತಿಂಗಳಲ್ಲಿ 25 ಸ್ಕಾರ್ಪಿಯೊ ಕಾರುಗಳನ್ನು ಕದ್ದು, ಪೊಲೀಸರಿಗೆ ಕರೆ ಮಾಡಿ 25 ಕಾರು ಕದ್ದಿದ್ದೇನೆ ತಾಕತ್ತು ಇದ್ದರೆ ಬಂಧಿಸಿ ಎಂದು ಚಾಲೆಂಜ್ ಹಾಕಿದ್ದ.
Advertisement
ಚೆನ್ನೈ ಪೊಲೀಸರಿಂದ ತಲೆಮರೆಸಿಕೊಂಡು ಕರ್ನಾಟಕ್ಕೆ ಬಂದಿದ್ದ ಆರೋಪಿ ಪರಮೇಶ್ವರ್ ಇಲ್ಲಿಯೂ ತನ್ನ ಕೈಚಳಕ ತೋರಿದ್ದು, ಮೈಕೋಲೇಔಟ್, ವೈಯ್ಯಾಲಿ ಕಾವಲ್, ಮಡಿವಾಳ ಮತ್ತು ಹುಳಿಮಾವು ಸೇರಿದಂತೆ ಹಲವು ಪೊಲೀಸ್ ಠಾಣಾ ಪೊಲೀಸರು ಈತನನ್ನು ಹುಡುಕುತ್ತಿದ್ದರು. ಇದರ ಜೊತೆಗೆ ಇತ್ತೀಚಿಗಷ್ಟೇ ಮಡಿವಾಳ ವ್ಯಾಪ್ತಿಯಲ್ಲಿ ಹೆಣ್ಣು ಮಕ್ಕಳ ಪಿಜಿಯ ಬಾತ್ ರೂಂಗೆ ಸಿಸಿ ಕ್ಯಾಮೆರಾ ಇಡಲು ಹೋಗಿದ್ದ ಪರಮೇಶ್ವರ್ ಅನ್ನು ಮಡಿವಾಳ ಪೊಲೀಸರು ಬಂಧಿಸಿದ್ದರು.
Advertisement
ಸುಮಾರು 17 ಪ್ರಕರಣದಲ್ಲಿ ಬೇಕಿದ್ದ ಪರಮೇಶ್ವರ್ ಬೈಕ್ ಕದ್ದು ಹುಳಿಮಾವು ಪೊಲೀಸರು ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ. ನಂತರ ಆರೋಪಿಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ಪೊಲೀಸರಿಗೆ ಪರಮೇಶ್ವರ್ ತಾನು 118 ಕಾರು ಕದ್ದಿದ್ದ ವಿಚಾರವನ್ನು ಒಪ್ಪಿಕೊಂಡಿದ್ದಾನೆ. ಈತನ ಪತ್ನಿ ಹೈಕೋರ್ಟ್ ವಕೀಲರಾಗಿದ್ದು, ಮಗ ಹಾಕಿ ಸ್ಟೇಟ್ ಲೇವೆಲ್ ಪ್ಲೇಯರ್ ಆಗಿದ್ದಾನೆ.