ಬೆಂಗಳೂರು: ಕರಾವಳಿಯ ಕಂಬಳ ವೀರ ಶ್ರೀನಿವಾಸ್ ಗೌಡಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಕೇಂದ್ರ ಕ್ರೀಡಾ ಸಚಿವರು, ಉಪರಾಷ್ಟ್ರಪತಿ ಸೇರಿದಂತೆ ಆನೇಕರು ಪ್ರಶಂಸೆಯ ಸುರಿಮಳೆಯನ್ನೆ ಸುರಿಸುತ್ತಿದ್ದಾರೆ. ಕಂಬಳ ವೀರನ ಶರವೇಗದ ಓಟ ತಿಳಿದು ಕೇಂದ್ರ ಸಚಿವರು ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ.
ಓಟಗಾರ ಉಸೇನ್ ಬೋಲ್ಟ್ ಗಿಂತ ವೇಗವಾಗಿ ಓಡಿದ ಮೂಡು ಬಿದಿರೆಯ ಕಂಬಳ ವೀರನಿಗೆ ಒಲಂಪಿಕ್‍ನಲ್ಲಿ ಭಾಗವಹಿಸಲು ಪೂರ್ವ ತಯಾರಿಯಾಗಿ ಕೋಚಿಂಗ್ ನೀಡುವ ಮಾತುಗಳು ಕೇಳಿ ಬರುತ್ತಿವೆ.
ಇದರ ಮಧ್ಯದಲ್ಲಿ ವಿಶ್ವ ದಾಖಲೆ ಮಾಡಿರುವ ಕಂಬಳ ವೀರನಿಗೆ ರಾಜ್ಯ ಕಾರ್ಮಿಕ ಇಲಾಖೆ ಸೌಲಭ್ಯ ನೀಡಲು ಮುಂದಾಗಿದೆ. ಈ ಹಿನ್ನೆಲೆ ಇಲಾಖೆಯ ಹಿರಿಯ ಅಧಿಕಾರಿಗಳು ಶ್ರೀನಿವಾಸ್ ಅವರ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಕಾರ್ಮಿಕ ಇಲಾಖೆಯ ಹಿರಿಯ ತನಿಖಾಧಿಕಾರಿಗಳಾದ ಮೇರಿ ಹಾಗೂ ವಿರೇಂದ್ರ ಅವರು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಮೂಡುಬಿದರೆಯ ಮಿಯಾರಿನ ಯುವಕ ಶ್ರೀನಿವಾಸ್ ಗೌಡ ಅವರಿಗೆ ಕಾರ್ಮಿಕ ಇಲಾಖೆ ಸೌಲಭ್ಯ ನೀಡಲು ಮುಂದಾಗಿದೆ ಎಂಬುದನ್ನ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಮ್ಮ ಟ್ವಿಟ್ಟರಿನಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಓದಿ: ಕರಾವಳಿಯ ಕಂಬಳ ಓಟಗಾರ ದೇಶಾದ್ಯಂತ ಟ್ರೆಂಡಿಂಗ್- ಕೇಂದ್ರವನ್ನೂ ತಲುಪಿದ ಸಾಧನೆ
ಕರಾವಳಿಯ ಗ್ರಾಮೀಣ ಕ್ರೀಡೆ ಕಂಬಳದಲ್ಲಿ ವಿಶ್ವದಾಖಲೆ ಮಾಡಿರುವ ಮೂಡುಬಿದಿರೆಯ ಮೀಯಾರಿನ ಯುವಕ ಶ್ರೀನಿವಾಸ ಗೌಡ ಅವರಿಗೆ ಇಲಾಖೆಯಿಂದ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಇಂದು ಕಾರ್ಮಿಕ ಇಲಾಖೆಯ ಹಿರಿಯ ತನಿಖಾಧಿಕಾರಿಗಳಾದ ಮೇರಿ ಹಾಗೂ ವಿರೇಂದ್ರ ಅವರು ಭೇಟಿಯಾಗಿ ಮಾಹಿತಿ ಪಡೆದರು.
ಕಂಬಳ ವೀರ !!!@mani1972ias @DeputyLabour pic.twitter.com/WX7wcg5U1V
— Shivaram Hebbar (@ShivaramHebbar) February 15, 2020
ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಐಕಳದಲ್ಲಿ ನಡೆದ ಕಂಬಳದ ಓಟದಲ್ಲಿ 145.5 ಮೀ ದೂರವನ್ನು 13.63 ಸೆಕೆಂಡುಗಳಲ್ಲಿ ಕ್ರಮಿಸುವ ಮೂಲಕ ಶ್ರೀನಿವಾಸ ಗೌಡ ಮಾಡಿರುವ ಸಾಧನೆ ದೇಶದ ಗಮನ ಸೆಳೆದಿದೆ. ಅಲ್ಲದೆ ಕಂಬಳ ಗದ್ದೆಯಲ್ಲಿ ಕೋಣಗಳೊಂದಿಗೆ 100 ಮೀ ದೂರವನ್ನು 9.55 ಸೆಕೆಂಡುಗಳಲ್ಲಿ ಕ್ರಮಿಸುವ ಮೂಲಕ ಸಾಧನೆ ಮಾಡಿದ್ದಾರೆ. ಕ್ರೀಡಾ ಪೋತ್ಸಾಹ ನೀಡಲು ಮುಂದಾಗಿರುವ ಕಾರ್ಮಿಕ ಇಲಾಖೆಯು ಯಾವ ರೀತಿ ಸೌಲಭ್ಯ ಮತ್ತು ಪ್ರೋತ್ಸಾಹ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.