ಬೆಂಗಳೂರು: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಅನುಮಾನಸ್ಪದವಾಗಿ ಬಿಳಿ ಬಣ್ಣದ ಬಟ್ಟೆ ಧರಿಸಿ ಓಡಾಡಿದ್ದ ವ್ಯಕ್ತಿ ಪತ್ತೆಯಾಗಿದ್ದಾರೆ. ಸ್ವತಃ ಅವರೇ ಡಿಸಿಪಿ ಕಚೇರಿಗೆ ಭೇಟಿ ನೀಡಿ ನಿಜ ಘಟನೆಯನ್ನು ವಿವರಿಸಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿರುವ ವ್ಯಕ್ತಿ ರಿಯಾಜ್ ಅಹ್ಮದ್ (70) ಆಗಿದ್ದು ಮೆಜೆಸ್ಟಿಕ್‍ನಲ್ಲಿ ವಾಚ್ ವ್ಯಾಪಾರಿ ಹಾಗೂ ರಿಪೇರಿ ಮಾಡುವ ವ್ಯಕ್ತಿಯಾಗಿದ್ದಾರೆ. ಅವರು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ ಚೆನ್ನಣ್ಣನವರ್ ಅವರ ಕಚೇರಿಗೆ ಹಾಜರಾಗಿ ತನ್ನ ವಿವರವನ್ನು ನೀಡಿದ್ದಾರೆ.
Advertisement
Advertisement
ನಾನು ನಾಯಂಡಹಳ್ಳಿ ನಿವಾಸಿಯಾಗಿದ್ದು, ಮೆಜೆಸ್ಟಿಕ್‍ನಲ್ಲಿ ವಾಚ್ ರಿಪೇರಿ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದೇನೆ. ನಿತ್ಯವೂ ಮೆಟ್ರೋದಲ್ಲಿ ಓಡಾಡುತ್ತೇನೆ ಎಂದು ತಿಳಿಸಿದ್ದಾರೆ.
Advertisement
ನಾನು ಯಾವುದೇ ಉಗ್ರ ಸಂಘಟನೆಗೆ ಸೇರಿಲ್ಲ. ಶಂಕಿತ ವ್ಯಕ್ತಿ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದರಿಂದ ಜನರು, ನನ್ನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ನನಗೆ ರಕ್ಷಣೆ ಕೊಡಿ. ಗಡ್ಡದಾರಿಗಳೆಲ್ಲಾ ಉಗ್ರರಾ? ಗಡ್ಡ ಬಿಡುವುದೇ ತಪ್ಪೇ ಎಂದು ಅಳಲು ತೋಡಿಕೊಂಡಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ.
Advertisement
ಆಗಿದ್ದೇನು?:
ಸೋಮವಾರ ರಾತ್ರಿ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಕಪ್ಪು ಬಣ್ಣದ ಸೂಟ್ ಧರಿಸಿದ್ದ ವ್ಯಕ್ತಿಯೊಬ್ಬ ಮೆಟಲ್ ಡಿಟೆಕ್ಟರ್ ಬಳಿ ಹಾದು ಹೋದಾಗ ಸದ್ದಾಗಿದೆ. ಈ ವೇಳೆ ಆತನ ತಪಾಸಣೆ ಮಾಡಲು ಸೆಕ್ಯೂರಿಟಿ ಮುಂದಾಗಿದ್ದಾರೆ. ಆಗ ಆ ವ್ಯಕ್ತಿ ಎಸ್ಕೇಪ್ ಆಗಿದ್ದಾನೆ.
ಶಂಕಿತ ಆಗಮಿಸೋ ಮುನ್ನ ಮೆಟ್ರೋ ನಿಲ್ದಾಣಕ್ಕೆ ಜುಬ್ಬಾಧಾರಿಯಾಗಿದ್ದ ರಿಯಾಜ್ ಅಹ್ಮದ್ ಆಗಮಿಸಿದ್ದರು. ಮೆಟಲ್ ಡಿಟೆಕ್ಟರ್ ಹಾದು ಮೆಟ್ರೋ ನಿಲ್ದಾಣಕ್ಕೆ ಎಂಟ್ರಿಯಾದ ಕೂಡಲೇ ಆ ಕಡೆ ಈ ಕಡೆ ನೋಡಿಕೊಂಡು ಮುಂದೆ ರಿಯಾಜ್ ಅಹ್ಮದ್ ಮುಂದೆ ತೆರಳಿದ್ದರು. ಇವರ ವರ್ತನೆ ಅನುಮಾನ ಮೂಡಿಸುವ ಹಾಗೆ ಇದ್ದ ಕಾರಣ ವಿಡಿಯೋ ರಿಲೀಸ್ ಆಗಿತ್ತು. ಈಗ ಸ್ವತ: ಅವರೇ ಚೆನ್ನಣ್ಣನವರ್ ಅವರನ್ನು ಭೇಟಿಯಾಗಿ ವಿವರಿಸಿದ್ದಾರೆ.
ಇಲ್ಲಿಯವರೆಗೂ ಕಪ್ಪು ಬಣ್ಣದ ಜುಬ್ಬಾ ಧರಿಸಿರುವ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಡಿಜಿ ಐಜಿಪಿ ನೀಲಮಣಿ ರಾಜು ಅವರು, ಅದಷ್ಟು ಬೇಗ ಈ ಶಂಕಿತ ವ್ಯಕ್ತಿಯನ್ನು ಪತ್ತೆ ಹಚ್ಚುವಂತೆ ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ.
ಮೆಟ್ರೋ ನಿಲ್ದಾಣದಲ್ಲಿ ಶಂಕಿತ ವ್ಯಕ್ತಿಯ ಓಡಾಟದ ಬೆನ್ನಲ್ಲೆ ಪ್ರಯಾಣಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಮೆಟ್ರೋಗೆ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ. ಮೆಜೆಸ್ಟಿಕ್‍ನ ಕೆಂಪೇಗೌಡ ಮೆಟ್ರೋ ನಿಲ್ದಾಣ ಹಾಗೂ ಚಿಕ್ಕಲಾಲ್ ಬಾಗ್ ಗೇಟ್ ಎರಡು ಕಡೆಯಿಂದಲೂ ಇಂದು ಮೆಟ್ರೋ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ಶಂಕಿತ ವ್ಯಕ್ತಿಯ ಭಯದಿಂದಾಗಿ ಎರಡೂ ಗೇಟ್‍ನಲ್ಲಿಯೂ ಹೆಚ್ಚುವರಿ ಪೊಲೀಸರ ಭದ್ರತೆ ಒದಗಿಸಲಾಗಿದೆ.
ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟವಾದ ಹಿನ್ನೆಲೆಯಲ್ಲಿ ದೇಶದಲ್ಲಿ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಲಾಗಿದೆ. ಈ ಹಿಂದೆ ಬೆಂಗಳೂರಿಗೆ ಉಗ್ರರು ಬಂದಿಳಿದಿದ್ದಾರೆ. ಐಟಿ ಕಂಪನಿಗಳ ಮೇಲೆ ದಾಳಿ ನಡೆಸಲು ತಯಾರಿ ಮಾಡುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಭಾನುವಾರದಂದು ಬೆಂಗಳೂರು ಸಿಟಿ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಟ್ವಿಟ್ಟರ್ ಮೂಲಕ ಸ್ಪಷ್ಟಪಡಿಸಿದ್ದರು.