ಬಳ್ಳಾರಿ/ಹಾವೇರಿ/ಕೊಪ್ಪಳ: ಸಿಡಿಲು ಬಡಿದು ಇಬ್ಬರು ಮೃತಪಟ್ಟ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಇತ್ತ ಕೊಪ್ಪಳದಲ್ಲಿಯೂ ಒಂದು ಎತ್ತು ಸಾವನ್ನಪ್ಪಿದೆ.
ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಇಬ್ರಾಹಿಂಪುರದಲ್ಲಿ ಕುರಿಗಾಯಿ ಹಾಲಪ್ಪ (30) ಹಾಗೂ ಹೂವಿನಹಡಗಲಿ ತಾಲೂಕಿನ ಕೊಂಬಳಿ ಗ್ರಾಮದಲ್ಲಿ ಕುರಿಗಾಯಿ ಲಕ್ಷ್ಮಣ (30) ಸಾವನ್ನಪ್ಪಿದ ದುರ್ದೈವಿಗಳು. ಮೃತ ಲಕ್ಷ್ಮಣ ಧಾರವಾಡ ಜಿಲ್ಲೆಯ ಹರ್ಲಾಪುರ ಗ್ರಾಮದ ನಿವಾಸಿ. ಕುರಿ ಮೇಯಿಸುತ್ತಾ ಊರಿಂದ ಊರಿಗೆ ಹೋಗುತ್ತಿದ್ದ ಲಕ್ಷ್ಮಣ ಇಂದು ಕೊಂಬಳಿ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಹಾವೇರಿ ತಾಲೂಕಿನ ಅಗಡಿ ಗ್ರಾಮದಲ್ಲಿ ಸಿಡಿಲು ಪಡಿದು ಒಂದು ಎತ್ತು ಸಾವನ್ನಪ್ಪಿದೆ. ಅಗಡಿ ಗ್ರಾಮದ ರೈತ ಶಬ್ಬೀರ್ ಸಾಬ್ ಚೋಪದಾರ ಅವರು ಜಮೀನಿನಲ್ಲಿ ಉಳುಮೆ ಮಗಿಸಿ ಮನೆಗೆ ಹೋಗುತ್ತಿದ್ದರು. ಈ ವೇಳೆ ದುರ್ಘಟನೆ ನಡೆದಿದೆ. ಶಬ್ಬೀರ್ ಸಾಬ್ ಅವರಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕೊಪ್ಪಳ ಜಿಲ್ಲೆಯಾದ್ಯಂತ ಭರ್ಜರಿ ಮಳೆಯಾಗಿದ್ದು, ಬಿಸಿಲಿಗೆ ಬಸವಳಿದಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ. ಇಂದು ಸಂಜೆ ಅರ್ಧಗಂಟೆಗೂ ಅಧಿಕ ಕಾಲ ಗಾಳಿ-ಗುಡುಗು ಸಹಿತ ಧಾರಾಕಾರ ಮಳೆಯಾಯಿತು. ಚಿಕ್ಕಬಗನಾಳ ಗ್ರಾಮದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದ್ದು, ವಿವಿಧೆಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.