ಬಳ್ಳಾರಿ: ಆರೋಗ್ಯ ಸಚಿವ ಶ್ರೀರಾಮುಲು ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ತಮ್ಮ ಹಿರಿಯ ಮಗಳ ಮದುವೆಗೆ ಆಹ್ವಾನ ನೀಡಿದ್ದಾರೆ.
ಕಳೆದ ಎರಡು ದಿನಗಳಿಂದ ದೆಹಲಿಯ ಪ್ರವಾಸದಲ್ಲಿ ಇರುವ ಶ್ರೀರಾಮುಲು ಅವರು ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಪುತ್ರಿಯ ಲಗ್ನ ಪತ್ರಿಕೆ ನೀಡಿದ್ದರು. ಇಂದು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಅವರು, ಪುತ್ರಿಯ ಮದುವೆಗೆ ಬಂದು ನವ ದಂಪತಿಯನ್ನು ಆಶೀರ್ವದಿಸುವಂತೆ ಕೇಳಿಕೊಂಡರು. ನಂತರ ಬಿಜೆಪಿಯ ನಾಯಕರು, ಕೇಂದ್ರ ಸಚಿವರಿಗೂ ಮದುವೆಯ ಕರೆಯೋಲೆಯನ್ನು ನೀಡಿ, ಮದುವೆಗೆ ಬರುವಂತೆ ಕೋರಿಕೊಂಡರು.
ಶ್ರೀರಾಮಲು ಅವರ ಪುತ್ರಿ ರಕ್ಷಿತಾ ಹಾಗೂ ಹೈದರಾಬಾದ್ ಮೂಲದ ಉದ್ಯಮಿ ಪುತ್ರ ಲಲಿತ್ ಕುಮಾರ್ ಅವರ ವಿವಾಹ ಕಾರ್ಯಕ್ರಮವು ಮುಂದಿನ ತಿಂಗಳು ಮಾರ್ಚ್ 4 ಮತ್ತು 5ರಂದು ಬೆಂಗಳೂರಿನ ಪ್ಯಾಲೇಸ್ ಮೈದಾನದಲ್ಲಿ ನಡೆಯಲಿದೆ. ಹೀಗಾಗಿ ಶ್ರೀರಾಮುಲು ಅವರು ಮಗಳ ಮದುವೆ ತಯಾರಿಯಲ್ಲಿ ತೊಡಗಿದ್ದಾರೆ.