ಬೆಂಗಳೂರು: ಬಳ್ಳಾರಿ ಎಸ್‌ಪಿ ಪವನ್ ನಿಜ್ಜೂರ್ (Pavan Nejjuru) ಆತ್ಮಹತ್ಯೆಗೆ ಯತ್ನಿಸಿಲ್ಲ ಎಂದು ಅವರ ಸ್ನೇಹಿತ, ಬೆಂಗಳೂರು ಸಿಸಿಬಿ ಡಿಸಿಪಿ ಶ್ರೀಹರಿಬಾಬು (Shrihari Babu) ಹೇಳಿದ್ದಾರೆ.
ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈಗ ಶಿರಾ ಬಳಿಯ ಫಾರ್ಮ್‌ಹೌಸ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಪವನ್ ಆತ್ಮಹತ್ಯೆಗೆ ಯತ್ನಿಸಿದ್ದ ವರದಿ ಸುಳ್ಳು ಎಂದಿದ್ದಾರೆ.
ಏನಿದು ವದಂತಿ?
ಸರ್ಕಾರ ಅಮಾನುತು ಆದೇಶ ಪ್ರಕಟಿಸಿದ ಬಳಿಕ ಬಳ್ಳಾರಿ ಎಸ್‌ಪಿ ಪವನ್ ನಿಜ್ಜೂರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿ ಹರಡಿತ್ತು. ಜ.1 ರಂದು ಅಧಿಕಾರ ಸ್ವೀಕರಿಸಿದ್ದ ಪವನ್ ನಿಜ್ಜೂರ್ ಅವರನ್ನು ಕರ್ತವ್ಯ ಲೋಪದ ಆರೋಪದ ಅಡಿ ಸರ್ಕಾರ ನಿನ್ನೆ (ಜ.2) ರಾತ್ರಿ ಅಮಾನತು ಮಾಡಿ ಆದೇಶ ಪ್ರಕಟಿಸಿತ್ತು. ರಾತ್ರಿ ಸರ್ಕಾರದ ಆದೇಶ ನೋಡಿ ನಿಜ್ಜೂರ್ ಅವರು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಇದನ್ನೂ ಓದಿ: ಪವನ್ ನಿಜ್ಜೂರು ಅಮಾನತು – ಬ್ಯಾನರ್ ಗಲಾಟೆಯಾದಾಗ ಪಾರ್ಟಿ ಮೂಡ್‌ನಲ್ಲಿದ್ದ ಬಳ್ಳಾರಿ ಎಸ್‌ಪಿ!
ಬಳ್ಳಾರಿಯಿಂದ ಮಂಡ್ಯ ಎಸ್‌ಪಿಯಾಗಿ ವರ್ಗಾವಣೆಯಾಗಿರುವ ಶೋಭಾರಣಿ ಅವರು ಪವನ್ ನಿಜ್ಜೂರ್ ಆತ್ಮಹತ್ಯೆಗೆ ಯತ್ನಿಸಿಲ್ಲ ಎಂದು ತಿಳಿಸಿದ್ದಾರೆ. ನಾನು ಅವರ ಜೊತೆ ಮಾತನಾಡಿದ್ದೇನೆ. ಆತ್ಮಹತ್ಯೆ ಯತ್ನ ಎನ್ನುವುದು ಸುಳ್ಳು. ಸದ್ಯ ಅವರು ತಮ್ಮ ಫಾರ್ಮ್ ಹೌಸ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಜ.1 ರಂದು ಬಳ್ಳಾರಿ ಎಸ್‌ಪಿಯಾಗಿ ಪವನ್ ನೆಜ್ಜೂರ್ ಶೋಭಾರಾಣಿ ಅವರಿಂದ ಅಧಿಕಾರ ಸ್ವೀಕರಿಸಿದ್ದರು. ಜ.2 ರಂದು ಬ್ಯಾನರ್ ಗಲಾಟೆ ಪ್ರಕರಣವನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂಬ ಕಾರಣ ನೀಡಿ ಅಮಾನತು ಮಾಡಲಾಗಿತ್ತು.
ಬಳ್ಳಾರಿ ರೇಂಜ್ ಡಿಐಜಿ ಅವರು ಈ ಪ್ರಕರಣವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿಲ್ಲ. ಹೀಗಾಗಿ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ವರದಿ ನೀಡಿದ್ದರು. ಇನ್ನೊಂದು ಕಡೆ ಡಿಜಿ ಅಂಡ್ ಐಜಿಪಿ ಕಡೆಯಿಂದ ಸರ್ಕಾರಕ್ಕೆ ಅಮಾನತುಗೊಳಿಸುವಂತೆ ವರದಿ ಸಲ್ಲಿಕೆಯಾಗಿತ್ತು. ಹೀಗಾಗಿ ಪವನ್ ನೆಜ್ಜೂರ್ ಅವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಪ್ರಕಟಿಸಿತ್ತು.

