– ರೆಡ್ಡಿ, ರಾಮುಲುಗೆ ತಾಯಿಯಿದ್ದಂತೆ ಇದ್ದರು
ಬಳ್ಳಾರಿ: ಹೇ.. ನೀನು ರೌಡಿಯಂಗೆ ಇದ್ದೀಯಾ. ಸಾರ್ವಜನಿಕ ಜೀವನದಲ್ಲಿ ಇರೋರು ಹಿಂಗೆ ಇರಬಾರದು. ಮೊದಲು ನೀನು ಕಟಿಂಗ್ ಮಾಡಿಸು. ಒಳ್ಳೆಯ ಬಟ್ಟೆ ಹಾಕಿಕೋ ಎಂದು ಶಾಸಕ ಶ್ರೀರಾಮುಲು ಅವರಿಗೆ ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಬುದ್ಧಿ ಮಾತು ಹೇಳಿದ್ದರಂತೆ.
ಬಳ್ಳಾರಿ ಲೋಕಸಭಾ ಚುನಾವಣೆಗೆ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧೆ ಮಾಡಿದ್ದ ಸುಷ್ಮಾ ಸ್ವರಾಜ್ ಅವರೊಂದಿಗೆ 1999 ರಲ್ಲಿ ಬಿ. ಶ್ರೀರಾಮುಲು ಕೂಡ ಮೊದಲ ಬಾರಿಗೆ ಬಳ್ಳಾರಿ ವಿಧಾನಸಭೆಗೆ ಸ್ಪರ್ಧೆ ಮಾಡಿದ್ದರು. ಈ ವೇಳೆ ಹೀಗೆ ಬುದ್ಧಿ ಮಾತು ಹೇಳಿದ್ದರು. ಅವರು ತಮಗೆ ಹೀಗೆ ಬೈದು ಬುದ್ಧಿ ಹೇಳಿದ್ದಕ್ಕೆ ನಾನು ಇಂದು ಸಾರ್ವಜನಿಕ ಜೀವನದಲ್ಲಿದ್ದೇನೆ. ಅಲ್ಲದೆ ನನಗೆ ರಾಜಕೀಯ ಜೀವನದಲ್ಲಿ ಜನ್ಮ ನೀಡಿದ್ದೇ ಸುಷ್ಮಾ ಸ್ವರಾಜ್ ಎಂದು ಶಾಸಕ ನೆನಪು ಮಾಡಿಕೊಳ್ಳುತ್ತಾರೆ.
Advertisement
Advertisement
1999ರ ಲೋಕಸಭಾ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಏಕಕಾಲಕ್ಕೆ ಸುಷ್ಮಾ ಸ್ವರಾಜ್ ಹಾಗೂ ಶ್ರೀರಾಮುಲು ಬಳ್ಳಾರಿಯಿಂದ ಸ್ಪರ್ಧೆ ಮಾಡಿದ್ದರು. ಆದರೆ ಆಗ ತಾನೇ ರಾಜಕೀಯ ಆರಂಭಿಸಿದ್ದ ಯುವಕ ಶ್ರೀರಾಮುಲುಗೆ ಸಾರ್ವಜನಿಕ ಜೀವನದಲ್ಲಿ ಹೇಗಿರಬೇಕು. ಯಾರೊಂದಿಗೆ ಹೇಗೆ ಮಾತನಾಡಬೇಕು. ಜನರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸಬೇಕು ಅನ್ನೋ ಬಗ್ಗೆ ಸುಷ್ಮಾ ಸ್ವರಾಜ್ ಪಾಠ ಮಾಡಿದ್ದರು. ಈ ಮಾತುಗಳೇ ಇಂದು ರೆಡ್ಡಿ- ರಾಮುಲು ಸಹೋದರರು ರಾಜ್ಯ ರಾಜಕೀಯದಲ್ಲಿ ಇರಲು ನೆರವಾಯ್ತು ಅನ್ನೋದು ಸುಳ್ಳಲ್ಲ ಎನ್ನಬಹುದಾಗಿದೆ.
Advertisement
Advertisement
ಮಾಜಿ ಸಚಿವ ಜನಾರ್ದನ ರೆಡ್ಡಿ, ಶಾಸಕ ಶ್ರೀರಾಮುಲುಗೆ ತಾಯಿಯಂತೆ ಇದ್ದ ಸುಷ್ಮಾ ಸ್ವರಾಜ್ ಅವರು ರೆಡ್ಡಿ- ರಾಮುಲುರ ಮೇಲಿನ ಪ್ರೀತಿಯಿಂದಲೇ ಪ್ರತಿ ವರ್ಷ ಬಳ್ಳಾರಿಗೆ ಬರುತ್ತಿದ್ದರು. ಡಾಕ್ಟರ್ ಮೂರ್ತಿಯವರ ಮನೆಯಲ್ಲಿ ವರಮಹಾಲಕ್ಷಿ ಪೂಜೆಗೆ ಪ್ರತಿ ವರ್ಷ ತಪ್ಪದೇ ಪೂಜೆ ಆಗಮಿಸುತ್ತಿದ್ದ ಸುಷ್ಮಾ ಸ್ವರಾಜ್, 13 ವರ್ಷಗಳ ಕಾಲ ಬಳ್ಳಾರಿಯಲ್ಲಿ ವರಮಹಾಲಕ್ಷಿ ಪೂಜೆ ಸಲ್ಲಿಸಿದ್ದರು. ಆದರೆ ಇದೀಗ ವರಮಹಾಲಕ್ಷಿ ಪೂಜೆಯ ಮುನ್ನವೇ ಸುಷ್ಮಾ ಸ್ವರಾಜ್ ಇನ್ನಿಲ್ಲವಾಗಿರುವುದು ಬಳ್ಳಾರಿ ಜನರು ಮನೆ ಮಗಳನ್ನೇ ಕಳೆದುಕೊಂಡಷ್ಟು ದುಃಖವನ್ನ ತಂದಿದೆ.
ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಸೋನಿಯಾಗಾಂಧಿ ವಿರುದ್ಧ ಸೋಲು ಕಂಡರೂ ಸುಷ್ಮಾ ಸ್ವರಾಜ್ ಬಳ್ಳಾರಿಯ ಮನೆ ಮಗಳಾಗಿದ್ದರು. ಹಣೆ ತುಂಬ ಕುಂಕಮವಿಟ್ಟುಕೊಂಡು ಮನೆ-ಮನೆಗೆ ಮತ ಕೇಳಲು ಬರುತ್ತಿದ್ದ ಸುಷ್ಮಾ ಸ್ವರಾಜ್ ಗೆ ಅಂದು ಬಳ್ಳಾರಿಯ ಜನರು ಅರಿಶಿಣ ಕುಂಕುಮ ಕೊಟ್ಟು ಮನೆಮಗಳಂತೆ ಪ್ರೀತಿ ತೋರಿದ್ದನ್ನು ಇನ್ನೂ ಬಳ್ಳಾರಿ ಜನರು ಮರೆತಿಲ್ಲ. ಹೀಗಾಗಿ ಸುಷ್ಮಾ ಸ್ವರಾಜ್ ಮೃತಪಟ್ಟಿರುವುದು ಬಳ್ಳಾರಿ ಜನರಲ್ಲಿ ದುಃಖವನ್ನುಂಟು ಮಾಡಿದೆ. ಅಲ್ಲದೆ ಮನೆ ಮಗಳು ತವರು ಮನೆ ತೊರೆದು ಹೋದಳಲ್ಲ ಎಂದು ಜನ ಕಣ್ಣಿರು ಹಾಕುವಂತಾಗಿದೆ.