– ವಿದೇಶದಿಂದಲೇ ಸಿಎಂ ಭರವಸೆ
ಬಳ್ಳಾರಿ: ನನ್ನ ಬೇಡಿಕೆ ಈಡೇರಿಸುವವರೆಗೆ ನನ್ನ ತಿರ್ಮಾನ ವಾಪಸ್ ತೆಗೆದುಕೊಳ್ಳಲ್ಲ. ಮತ್ತೊಮ್ಮೆ ರಾಜೀನಾಮೆ ಅಂಗೀಕರಿಸಬೇಕೆಂದು ಮನವಿ ಮಾಡುವುದಾಗಿ ಹೊಸಪೇಟೆ ಶಾಸಕ ಆನಂದ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನನ್ನ ಕ್ಷೇತ್ರದಲ್ಲಿ ಇದ್ದೇನೆ. ನನಗೆ ಹಿರಿಯರು ಫೋನ್ ಮಾಡಿ ಹೇಳಿದ್ದಾರೆ. ಸರ್ಕಾರಕ್ಕೆ ಎರಡು ಬೇಡಿಕೆ ಇಟ್ಟಿದ್ದೇನೆ. ಈ ಎರಡನ್ನು ಈಡೇರಿಸುವವರೆಗೂ ನನ್ನ ನಿಲುವು ಬದಲಾಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಎರಡು ಬೇಡಿಕೆಯೇನು?
ಜಿಂದಾಲ್ ಸಂಸ್ಥೆ ಸೇರಿದಂತೆ ಯಾವುದೇ ಕಾರ್ಖಾನೆಗಳಿಗೆ ಲೀಸ್ ಕಂ ಸೇಲ್ ಕೊಡಬಾರದು. ಉದ್ಯೋಗ ಸೃಷ್ಟಿ ಮಾಡುವ ನೆಪದಲ್ಲಿ ಭೂಮಿ ಕಡಿಮೆ ಬೆಲೆಗೆ ಕೊಡುವುದು ಸೂಕ್ತವಲ್ಲ. ಲೀಸ್ ಮಾತ್ರ ಕೊಡಿ. ವಿಜಯನಗರ ಜಿಲ್ಲೆ ಆಗಬೇಕೆಂದು ಮನವಿ ಮಾಡಿದ್ದೇನೆ. ನನ್ನ ಈ ಬೇಡಿಕೆಗಳು ಈಡೇರಬೇಕು ಎಂದು ತಿಳಿಸಿದ್ದಾರೆ.
ಸಿಎಂ ಅವರು ವಿದೇಶದಿಂದಲೇ ನನಗೆ ಕರೆ ಮಾಡಿ, ಭರವಸೆ ನೀಡಿದರು. ಚರ್ಚೆಗೆ ನಾನು ಹೋಗುವುದಿಲ್ಲ. ಸರ್ಕಾರ ಏನೂ ಆದೇಶ ಹೊರಡಿಸುತ್ತದೆ ಎಂದು ಕಾದು ನೋಡುವುದಾಗಿ ತಿಳಿಸಿದ್ದಾರೆ.
13 ಮಂದಿ ಶಾಸಕರು ಶನಿವಾರ ರಾಜೀನಾಮೆ ನೀಡಿದ್ದರು. ಇದರಲ್ಲಿ ರಾಮಲಿಂಗಾ ರೆಡ್ಡಿ, ಮುನಿರತ್ನ ಹಾಗೂ ಆನಂದ್ ಸಿಂಗ್ ಹೊರತು ಪಡಿಸಿ ಉಳಿದೆಲ್ಲ ಶಾಸಕರು ಅಂದೇ ಮುಂಬೈಗೆ ತೆರಳಿದ್ದರು. ಇತ್ತ ಮುನಿರತ್ನ ಹಾಗೂ ಬೆಂಗಳೂರಿನಲ್ಲೇ ಇದ್ದರೆ ಆನಂದ್ ಸಿಂಗ್ ಅವರು ಮಾತ್ರ ತಮ್ಮ ಕ್ಷೇತ್ರಕ್ಕೆ ವಾಪಸ್ಸಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ನಡೆ ಕುತೂಹಲ ಹುಟ್ಟಿಸಿತ್ತು.