ಬಳ್ಳಾರಿ: ಜಿಲ್ಲೆಯ ಹಿರೇಹಡಗಲಿ ಪೊಲೀಸ್ ಠಾಣೆವ್ಯಾಪ್ತಿಯ ಕತ್ತೆಬೆನ್ನೂರು ಗ್ರಾಮದ ಬಳಿ ಮದುವೆ ದಿಬ್ಬಣದ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಟ್ರ್ಯಾಕ್ಟರ್ ನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಇತ್ತ ಏಳು ಮಂದಿಗೆ ತೀವ್ರ ಗಾಯಗಳಾಗಿರುವ ಘಟನೆ ಗುರುವಾರ ನಡೆದಿದೆ.
ಮೃತಪಟ್ಟವರನ್ನು ದಾಸಹನಹಳ್ಳಿ ಮೂಲದ ಅಂಗಡಿ ಗೀತಾ(40), ಸೊಪ್ಪನ ಸುನಿತಾ(30), ವೀರಣ್ಣ ಜಕ್ಕಣ್ಣನವರ(35), ಹೆಗ್ಗಜ್ಜರ ಕಾಳಮ್ಮ(50) ಎಂದು ಗುರುತಿಸಲಾಗಿದೆ. ಗಂಭಿರ ಗಾಯಗೊಂಡ 7 ಮಂದಿಯನ್ನು ಹೂವಿನಹಡಗಲಿ ಮತ್ತು ಹರಪನಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೂವಿನ ಹಡಗಲಿಯ ಭೀರಬ್ಬಿ ಗ್ರಾಮದಲ್ಲಿ ತಮ್ಮ ಸಂಬಂಧಿಕರ ಮದುವೆ ಮುಗಿಸಿಕೊಂಡು ಕುಟುಂಬ ವಾಪಸ್ ದಾಸಹನಹಳ್ಳಿಗೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ. ಕತ್ತೇಬೆನ್ನೂರು ಬಳಿ ಟ್ರ್ಯಾಕ್ಟರ್ ಆಯತಪ್ಪಿ ಪಲ್ಟಿಯಾಗಿ ಅಪಘಾತ ಜರುಗಿದೆ. ಸ್ಥಳಕ್ಕೆ ಸಿಪಿಐ ಮಾಲತೇಶ್ ಕೂನಬೇವು ಭೇಟಿ ನೀಡಿ ಪರಿಶೀಲಿಸಿ, ತನಿಖೆ ಕೈಗೊಂಡಿದ್ದಾರೆ. ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಈ ಸಂಭಂದ ಪ್ರಕರಣ ದಾಖಲಾಗಿದೆ.