ಬೆಂಗಳೂರು: ಲೋಕಸಭಾ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಹೊಸಪೇಟೆಯ ರೆಸಾರ್ಟ್ ನಲ್ಲಿ ನಡೆಸಿದ ಸಭೆಯಲ್ಲಿ ಬಳ್ಳಾರಿ ಕಾಂಗ್ರೆಸ್ ಶಾಸಕರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಟಾರ್ಗೆಟ್ ನೀಡಿದ್ದಾರೆ.
ಎಲ್ಲಾ ಶಾಸಕರು ತಮ್ಮ ಕ್ಷೇತ್ರದಲ್ಲಿ 30 ಸಾವಿರ ಮತಗಳ ಲೀಡ್ ತಂದುಕೊಡಬೇಕು. ಸಂಪುಟ ವಿಸ್ತರಣೆ ವೇಳೆ ಹೆಚ್ಚು ಲೀಡ್ ತಂದುಕೊಡುವ ಶಾಸಕರನ್ನು ಪರಿಗಣಿಸುತ್ತೇವೆ ಎಂದು ಸಿದ್ದರಾಮಯ್ಯ ಆಶ್ವಾಸನೆ ನೀಡಿದ್ದಾರೆ.
ಬೇರೆ ಸಂದರ್ಭದಲ್ಲಿ ಸೀನಿಯಾರಿಟಿ, ಸಾಮರ್ಥ್ಯವನ್ನು ಪರಿಗಣಿಸಬಹುದಿತ್ತು. ಆದರೆ ಲೋಕಸಭಾ ಚುನಾವಣಾ ದೃಷ್ಟಿಯಿಂದ ಈ ಉಪ ಚುನಾವಣೆಯನ್ನು ನಾವು ಗೆಲ್ಲಲೇಬೇಕು. ಇಲ್ಲಿ ಸೋಲಾದರೆ ರಾಷ್ಟ್ರಮಟ್ಟದಲ್ಲೂ ತಪ್ಪು ಸಂದೇಶ ರವಾನೆಯಾಗಲಿದೆ ಎಂದು ಸಿದ್ದರಾಮಯ್ಯ ಕಠಿಣವಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯಾವ ಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್ ಬರುತ್ತೋ ಅವರಿಗೆ ನಿಗಮ ಮಂಡಳಿಯೂ ಇಲ್ಲ ಎಂದಾಗ 6 ಜನ ಶಾಸಕರು ಕಕ್ಕಾಬಿಕ್ಕಿಯಾಗಿದ್ದಾರೆ. ಕೊನೆಗೆ ಲೀಡ್ ತಂದು ಕೊಡುವುದಾಗಿ ಬಳ್ಳಾರಿ ಕಾಂಗ್ರೆಸ್ ಶಾಸಕರು ಒಪ್ಪಿಕೊಂಡಿದ್ದಾರೆ. ಸಿದ್ದರಾಮಯ್ಯ ಟಾರ್ಗೆಟ್ ಗೆ ಪಕ್ಕದಲ್ಲೇ ಇದ್ದ ಜಲ ಸಂಪನ್ಮೂಲ ಸಚಿವ ಹಾಗೂ ಬಳ್ಳಾರಿ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಕೂಡಾ ಸಮ್ಮತಿ ಸೂಚಿಸಿದ್ದಾರೆ.
2014ರ ಚುನಾವಣೆಯಲ್ಲಿ ಶ್ರೀರಾಮುಲು 85,144 ಮತಗಳ ಅಂತರದಿಂದ ಗೆದ್ದಿದ್ದರು. ಶ್ರೀರಾಮುಲು ಅವರಿಗೆ 5,34,406 ಮತಗಳು ಬಿದ್ದಿದ್ದರೆ, ಕಾಂಗ್ರೆಸ್ಸಿನ ಎನ್‍ವೈ ಹನುಮಂತಪ್ಪ ಅವರಿಗೆ 4,49,262 ಮತಗಳು ಬಿದ್ದಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv