ಬಳ್ಳಾರಿ: ರೇಷನ್ ಕಿಟ್ ಕೇಳಿದ್ದಕ್ಕೆ ವಿಧವೆಯೊಬ್ಬರಿಗೆ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿದ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಬಳ್ಳಾರಿ ತಾಲೂಕಿನ ಬೆಳಗಲ್ಲು ತಾಂಡಾದ ಮೋತಿ ಬಾಯಿ (38) ಹಲ್ಲೆಗೆ ಒಳಗಾದ ವಿಧವೆ. ಬೆಳಗಲ್ಲು ತಾಂಡಾದ ನಿವಾಸಿಗಳಾದ ಲೇಬರ್ ಕಂಟ್ರಾಕ್ಟರ್ ರಾಮುನಾಯ್ಕ, ಲಾರಿ ಮಾಲೀಕರಾದ ಬಾಬು ನಾಯ್ಕ, ವೆಂಕಟೇಶ ನಾಯ್ಕ, ಲಕ್ಷ್ಮಣ ನಾಯ್ಕ ಹಾಗೂ ತೇಜು ನಾಯ್ಕ ಹಲ್ಲೆಗೈದವರು.
Advertisement
Advertisement
ಲಾಕ್‍ಡೌನ್ ಹಿನ್ನೆಲೆಯಲ್ಲಿ ಬಡ ಜನರಿಗೆ ಬೆಳಗಲ್ಲು ತಾಂಡಾ ಸಮೀಪ ಕಾರ್ಖಾನೆಗಳು ರೇಷನ್ ಕಿಟ್ ವಿತರಿಸುತ್ತಿದ್ದವು. ಆದರೆ ಆರೋಪಿ ಲೇಬರ್ ಕಂಟ್ರಾಕ್ಟರ್ ರಾಮುನಾಯ್ಕ ಕಾರ್ಖಾನೆಯ ಮಾಲೀಕರಿಂದ ರೇಷನ್ ಕಿಟ್ ಪಡೆದುಕೊಂಡಿದ್ದ. ಬಳಿಕ ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ತಾನು ಚುನಾವಣೆಗೆ ನಿಲ್ಲುವ ವಾರ್ಡ್ ನಲ್ಲಿ ಮಾತ್ರ ರೇಷನ್ ಕಿಟ್‍ಗಳನ್ನು ಶನಿವಾರ ವಿತರಿಸುತ್ತಿದ್ದ. ಈ ವೇಳೆ ಬೇರೆ ವಾರ್ಡಿನ ನಿವಾಸಿ ಮೋತಿ ಬಾಯಿ ಅವರು ಬಂದು ನಮಗೂ ರೇಷನ್ ಕಿಟ್ ಕೊಡಿ ಎಂದು ಕೇಳಿದ್ದಾರೆ.
Advertisement
ನೀನು ನನಗೆ ವೋಟ್ ಹಾಕಲ್ಲ, ನಾನ್ಯಾಕೆ ನಿಂಗ ರೇಷನ್ ಕಿಟ್ ಕೊಡಬೇಕು? ಕೊಡಲ್ಲ ಹೋಗು ಎಂದು ರಾಮುನಾಯ್ಕ ಅವಾಜ್ ಹಾಕಿದ್ದಾನೆ. ಆದರೆ ಮಹಿಳೆ, ನನಗೆ ಗಂಡ ಇಲ್ಲ, ಇಬ್ಬರು ಮಕ್ಕಳಿದ್ದಾರೆ. ದಯವಿಟ್ಟು ಕಿಟ್ ಕೊಡಿ ಎಂದು ಬೇಡಿಕೊಂಡಿದ್ದಾರೆ. ಕೊನೆಗೆ ಇಬ್ಬರ ಮಧ್ಯೆ ವಾಗ್ದಾಳಿ ನಡೆದಿದೆ. ಇದರಿಂದಾಗಿ ಮೋತಿ ಬಾಯಿ ಅವರ ಮೇಲೆ ಆರೋಪಿ ಕೋಪಗೊಂಡಿದ್ದ.
Advertisement
ರಾಮು ನಾಯ್ಕ ಸೇರಿದಂತೆ ಐವರು ಶನಿವಾರ ರಾತ್ರಿ ಮೋತಿಬಾಯಿ ಅವರ ಮನೆಗೆ ನುಗ್ಗಿ ಹಿಗ್ಗಾಮುಗ್ಗಾ ಥಳಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡು ಅರೆ ಪ್ರಜ್ಞಾಸ್ಥಿತಿಯಲ್ಲಿದ್ದ ಮೋತಿಬಾಯಿ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.
ಈ ಸಂಬಂಧ ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.