ಬಳ್ಳಾರಿ: ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿಯೇ ಎಂದು ಹರಪನಹಳ್ಳಿಯ ಬಿಜೆಪಿ ಶಾಸಕ ಕರುಣಾಕರ ರೆಡ್ಡಿ ಹೇಳಿದ್ದಾರೆ.
ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಜಿಲ್ಲೆಯ ನೆರೆ ಸಂತ್ರಸ್ತರಿಗೆ ಸೂರು ಕಲ್ಪಿಸುವ ಸಲುವಾಗಿ ಆಯೋಜಿಸಿದ್ದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕರುಣಾಕರ ರೆಡ್ಡಿ, ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿಯೇ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ನಾವು ಆಶಾವಾದಿಗಳಾಗಿರಬೇಕಷ್ಟೇ. ಅಂತಿಮ ತೀರ್ಮಾನ ಮಾಡೋದು ಹೈಕಮಾಂಡ್ ಮಾತ್ರ ಎಂದರು.
ಬಳಿಕ ಮಾತನಾಡಿದ ಅವರು ಹರಪನಹಳ್ಳಿ ತಾಲೂಕನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ರಚನೆ ಮಾಡಬೇಕೆಂಬುದು ಆ ಭಾಗದ ಜನರ ಕೂಗು. ಹೀಗಾಗಿ ಮುಖ್ಯಮಂತ್ರಿ ಬಿಎಸ್‍ವೈ ಅವರ ಮುಂದೆ ಈ ಬೇಡಿಕೆಯನ್ನು ಕಳೆದ ಸಭೆಯಲ್ಲಿ ಇಡಲಾಗಿದೆ. ಆದರೆ ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆಯ ಕುರಿತು ಡಿಸೆಂಬರ್ ತಿಂಗಳಲ್ಲಿ ಮತ್ತೊಂದು ಸಭೆ ಕರೆಯಲು ನಿರ್ಧರಿಸಲಾಗಿತ್ತು. ಆ ಸಭೆಯನ್ನು ಯಾವಾಗ ನಡೆಸಲಾಗುತ್ತದೆ ಎಂಬದನ್ನು ಕಾದು ನೋಡೋಣ ಎಂದಿದ್ದಾರೆ.