Connect with us

Bellary

ಜಿಂದಾಲ್ ಉದ್ಯೋಗಿ ನಾಪತ್ತೆ ಪ್ರಕರಣ ಸಾವಿನಲ್ಲಿ ಅಂತ್ಯ

Published

on

– ಉದ್ಯೋಗಿ ಸಾವಿನ ಬಗ್ಗೆ ಮಾಹಿತಿ ನೀಡಲಿಲ್ಲ ಜಿಂದಾಲ್
– ಮೃತ ವ್ಯಕ್ತಿಯ ಕುಟುಂಬಸ್ಥರಿಂದ ಪ್ರತಿಭಟನೆ

ಬಳ್ಳಾರಿ: ಜಿಂದಾಲ್ ಕಂಪನಿ ಉದ್ಯೋಗಿ ನಿಗೂಢ ನಾಪತ್ತೆ ಪ್ರಕರಣ ಸಾವಿನಲ್ಲಿ ಅಂತ್ಯವಾಗಿದೆ. ಕಂಪನಿಯಲ್ಲಿ ಸುಟ್ಟು ಬೂದಿಯಾಗಿರೋ ಉದ್ಯೋಗಿಯ ಬಗ್ಗೆ ಕಿಂಚಿತ್ತು ಕಾಳಜಿವಹಿಸಿದ ಜಿಂದಾಲ್ ವಿರುದ್ಧ ಇದೀಗ ಹೋರಾಟಗಳು ಪ್ರಾರಂಭವಾಗಿದೆ.

ಬಳ್ಳಾರಿಯ ದೇವಿನಗರ ನಿವಾಸಿ ದುರ್ಗಣ್ಣ ಮೃತ ದುರ್ದೈವಿ. ದುರ್ಗಣ್ಣ ಕಳೆದ ಹದಿನೈದು ವರ್ಷದಿಂದ ಜಿಂದಾಲ್ ಕಂಪನಿ ಆವರಣದ ಐಟಿಪಿಎಸ್ ಕೋಕೋ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಗುರುವಾರ ರಾತ್ರಿ ಪಾಳಿಯ ಕೆಲಸಕ್ಕೆಂದು ಹೋಗಿದ್ದ ದುರ್ಗಣ್ಣ ಶುಕ್ರವಾರ ಬೆಳಗ್ಗೆ ವಾಪಸ್ ಬಂದಿರಲಿಲ್ಲ. ಇದರಿಂದಾಗಿ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದರು.

ದುರ್ಗಣ್ಣ ಮೂರು ದಿನಗಳೆದರೂ ಮನೆಗೆ ಬಾರದೆ ಇದಿದ್ದರಿಂದ ಕುಟುಂಬಸ್ಥರು ಮಂಗಳವಾರ ಜಿಂದಾಲ್ ಕಂಪನಿಗೆ ಹೋಗುವ ಬಸ್ ತಡೆದು ಪ್ರತಿಭಟನೆ ಮಾಡಿದ್ದರು. ಪ್ರತಿಭಟನೆ ಬಿಸಿಯಿಂದ ಎಚ್ಚೆತ್ತ ಕಂಪನಿ ಸಿಸಿಟಿವಿ ಕ್ಯಾಮೆರಾ ಫುಟೇಜ್ ಪರಿಶೀಲನೆ ಮಾಡಿದಾಗ ಕಂಪನಿಯ ಒಳಗೆ ಹೋಗುವುದು ರೆಕಾರ್ಡ್ ಆಗಿದೆ. ಆದರೆ ವಾಪಸ್ ಬಂದಿರುವ ಬಗ್ಗೆ ದಾಖಲಾಗಿರಲಿಲ್ಲ. ನಂತರ ಪ್ಲ್ಯಾಂಟ್‍ನಲ್ಲಿ ಹುಡುಕಿದಾಗ ಸುಟ್ಟ ಸ್ಥಿತಿಯಲ್ಲಿ ದುರ್ಗಣ್ಣ ಅವರು ಬಳಸುತ್ತಿದ್ದ ಶೂ, ಬೆಲ್ಟ್ ಸಿಕ್ಕಿವೆ. ಈ ಆಧಾರಗಳಿಂದ ದುರ್ಗಣ್ಣ ಮೃತಪಟ್ಟಿದ್ದಾರೆಂದು ಘೋಷಿಸಲಾಗಿದೆ.

ದುರ್ಗಣ್ಣ ಅವರ ನಾಪತ್ತೆ ಬಗ್ಗೆ ಕುಟುಂಬಸ್ಥರು ತೋರಣಗಲ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಆದರೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಕುಟುಂಬಸ್ಥರ ಹೋರಾಟದ ಹಾದಿ ಹಿಡಿದಾಗ ಪೊಲೀಸರು ಮತ್ತು ಕಂಪನಿಯವರು ಎಚ್ಚೆತ್ತುಕೊಂಡು ನಾಪತ್ತೆಯಾಗಿರುವ ದುರ್ಗಣ್ಣ ಅವರ ಬಗ್ಗೆ ಪರಿಶೀಲಿಸಿದಾಗ ಮೃತಪಟ್ಟಿದ್ದು, ಬಯಲಿಗೆ ಬಂದಿದೆ.

ಕಳೆದೊಂದು ವಾರದಲ್ಲಿ ಇಷ್ಟೆಲ್ಲ ಅವಾಂತರವಾದರೂ ಕಂಪನಿ ಈವರೆಗೂ ಬಿಡಿಗಾಸು ಪರಿಹಾರ ನೀಡಲ್ಲ. ಅಷ್ಟೇ ಅಲ್ಲದೆ ಸೌಜನ್ಯಕ್ಕೂ ಕುಟುಂಬಸ್ಥರನ್ನು ಮಾತನಾಡಿಸಿಲ್ಲ. ಹೀಗಾಗಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಮತ್ತು ಮನೆಯ ಒಬ್ಬ ಸದಸ್ಯರಿಗೆ ಕೆಲಸ ನೀಡಬೇಕು ಎಂದು ದುರ್ಗಣ್ಣ ಅವರ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ದುರ್ಗಣ್ಣ ಅವರ ನಾಪತ್ತೆ ಮತ್ತು ಸಾವು ಹಲವು ಅನುಮಾನಗಳನ್ನು ಸೃಷ್ಟಿಸಿದೆ. ಜಿಂದಾಲ್ ಕಂಪನಿಯ ಪ್ರತಿಯೊಂದು ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ, ಎಚ್ಚರಿಕೆ ಗಂಟೆಗಳಿವೆ. ಇಷ್ಟಿದ್ದರೂ ವಾರದವರೆಗೂ ದುರ್ಗಣ್ಣ ಸಾವನ್ನಪ್ಪಿರುವ ಬಗ್ಗೆ ಕಂಪನಿ ಯಾಕೆ ಖಚಿತ ಪಡಿಸಲಿಲ್ಲ. ಅದೆಷ್ಟೋ ಪ್ರಕರಣಗಳಲ್ಲಿ ಕಂಪನಿ ತೋರುತ್ತಿರುವ ನಿರ್ಲಕ್ಷ್ಯಕ್ಕೆ ಕಾರಣವೇನು ಎಂಬ ಬಗ್ಗೆ ಸಮರ್ಪಕ ತನಿಖೆಯಾಗಬೇಕು ಎಂದು ಒತ್ತಾಯಿಸಲಾಗಿದೆ.

Click to comment

Leave a Reply

Your email address will not be published. Required fields are marked *